ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಸಮೀಪದ ಹೇರೂರು ಗ್ರಾಪಂ ವ್ಯಾಪ್ತಿಯ ಕುಂದೂರಿನಲ್ಲಿ ಅಪೂರ್ವ ಸ್ವ ಸಹಾಯ ಸಂಘ ಆಯೋಜಿಸಿದ್ದ ಸಂಘದ ಹನ್ನೊಂದನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ನಮಗೆ ವ್ಯಕ್ತಿತ್ವ ವಿಕಾಸ ಮಾಹಿತಿಗಳಿಂದ ಮಾತ್ರ ಬರುವುದಿಲ್ಲ. ಮಾಹಿತಿಗಳನ್ನು ತಿಳಿದುಕೊಳ್ಳುವುದು ಮಾತ್ರ ವಿದ್ಯಾಭ್ಯಾಸವೂ ಅಲ್ಲ. ವಿದ್ಯಾವಂತರಾಗಬೇಕು ಎಂದರೆ ಕೇವಲ ಶಾಲಾ ಕಾಲೇಜುಗಳಿಗೆ ತೆರಳಿದರೆ ಸಾಲುವುದಿಲ್ಲ. ಜೀವನದ ಮೌಲ್ಯಗಳನ್ನು ಅರಿತು ಸಮಾಜಕ್ಕೆ ಮೇಲ್ಪಂಕ್ತಿಯಾದರೆ, ವಿಚಾರ ಆಚಾರಗಳಂತೆ ನಮ್ಮ ಜೀವನದಲ್ಲಿ ಸಂಕಲ್ಪ ತೊಟ್ಟು ಮುನ್ನಡೆದರೆ ಅದೇ ನಿಜವಾದ ಶಿಕ್ಷಣವಾಗಲಿದೆ ಎಂದರು.ಉಪನ್ಯಾಸಕ ಜನಾರ್ಧನ ಮಂಡಗಾರು ಮಾತನಾಡಿ, ಧರ್ಮವೆಂದರೆ ಸನಾತನ ಮಾತ್ರ. ಉಳಿದದ್ದು ಎಲ್ಲವೂ ಕೇವಲ ಮತಗಳು. ಎಂದೂ ನಶಿಸದೆ ಇರುವುದೇ ಸನಾತನ ಧರ್ಮವಾಗಿದೆ. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಕೊನೆಯಿಲ್ಲ ಎಂಬುದು ಸನಾತನ ಧರ್ಮದಲ್ಲಿ ತಿಳಿಸಲಾಗಿದೆ.
ವಕೀಲ ಎಚ್.ಎಚ್.ಕೃಷ್ಣಮೂರ್ತಿ ಅಪೂರ್ವ ಸಹಕಾರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಎಂಬುದು ಮರೀಚಿಕೆಯಾಗಿದ್ದು, ಉಳ್ಳವರು, ಪ್ರಭಾವಿಗಳು, ಹಣವಂತರು ಪ್ರಕರಣಗಳನ್ನು ದೂರ ಎಳೆದು ನ್ಯಾಯವನ್ನು ದೂರ ಮಾಡುತ್ತಿದ್ದಾರೆ. ಹಿಂದೆ ಗ್ರಾಮೀಣ ಭಾಗದಲ್ಲಿ ಇದ್ದ ಪಂಚಾಯಿತಿ ಕಟ್ಟೆಗಳಲ್ಲಿ ಉತ್ತಮ ನ್ಯಾಯ ದೊರೆಯುತಿತ್ತು. ಇಂದು ಪುನಃ ಅದೇ ಮಾದರಿಯಲ್ಲಿ ನಡೆಯಬೇಕಿದೆ. ವ್ಯಾಜ್ಯಗಳನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುವುದು ಉತ್ತಮವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕುಂದೂರು ಮತ್ತು ವೀರಗಲ್ಲುಮಕ್ಕಿ ಸರ್ಕಾರಿ ಶಾಲಾ ಮಕ್ಕಳಿಗೆ ವಿವಿಧ ಪರಿಕರಗಳನ್ನು ನೀಡಲಾಯಿತು. ಹರಿಹರಪುರ ಪ್ರಭೋಧಿನಿ ಗುರುಕುಲಕ್ಕೆ ಧನ ಸಹಾಯ ಮಾಡಲಾಯಿತು.