ಅಕ್ಕಿಆಲೂರು: ನಿರುದ್ಯೋಗಿ ಪದವೀಧರರ ಸೃಷ್ಟಿಯಾಗುವುದು ಬೇಡ, ಸೃಜನಶೀಲ ಬದುಕು ರೂಪಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳುವ ಇಚ್ಛಾಶಕ್ತಿಯ ಶಿಕ್ಷಣ ಈಗ ಬೇಕಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಅಶೋಕ ಕುರ್ಲಿ ತಿಳಿಸಿದರು.ಸಮೀಪದ ತಿಳವಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗುರು ಗುರಿ ಇದ್ದರೆ ಶಿಕ್ಷಣ ಯಶಸ್ವಿಯಾಗುತ್ತದೆ. ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಪ್ರತಿ ವ್ಯಕ್ತಿ ಮೊದಲು ತಾನು ಏನು ಎಂಬುದನ್ನು ಅರಿಯಬೇಕು. ಕುಬ್ಜರಾಗಿ ಬದುಕುವುದು ಬೇಡ. ಎದ್ದು ನಿಂತು ನಡೆಯಬೇಕು. ಇಂದು ಮನೆ ಬಾಗಿಲಲ್ಲಿಯೇ ಶಿಕ್ಷಣ ಸಿಗುತ್ತಿದೆ. ಆದರೆ ಮಹಾತ್ವಾಕಾಂಕ್ಷೆಯ ಕೊರತೆ ಇದೆ. ವಿದ್ಯಾರ್ಥಿಗಳು ಸರಿಯಾದ ಸಮಯದಲ್ಲಿ ಒಳ್ಳೆಯ ನಿರ್ಣಯ ತೆಗೆದುಕೊಳ್ಳಬೇಕು. ನಮ್ಮ ಚರಿತ್ರೆಯನ್ನು ಓದಬೇಕು. ಆಗ ಭವಿಷ್ಯ ರೂಪಿಸಿಕೊಳ್ಳುವ ಚಿಂತನೆಗೆ ಇಂಬು ಸಿಗುತ್ತದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಸಾಧಕನಾಗುವ ಇಚ್ಛಾಶಕ್ತಿ ಇದ್ದರೆ ಮಾತ್ರ ಕ್ರಿಯಾಶೀಲತೆಯೊಂದಿಗೆ ಜಯ ಸಿಗಲು ಸಾಧ್ಯ. ಕೀಳರಿಮೆಯಿಂದ ಹೊರಬಂದು ವಾಸ್ತವದ ನೆಲೆಯಲ್ಲಿ ಎಲ್ಲವನ್ನೂ ನೋಡಿದರೆ ಮಾತ್ರ ಒಳ್ಳೆಯ ದಾರಿ ಸಿಗುತ್ತದೆ. ನಾಳೆಗಳು ಸಂಪೂರ್ಣವಾಗಿ ಸ್ಪರ್ಧಾತ್ಮಕವಾಗಿ ಉರುಳುತ್ತಿವೆ. ಬುದ್ಧಿವಂತ, ಕ್ರಿಯಾಶೀಲ ಮಾತ್ರ ಸರಿಯಾದ ಬದುಕು ಕಟ್ಟಿಕೊಳ್ಳಬಲ್ಲ. ಓದಿನ ಮೂಲಕ ಜಗತ್ತಿನ ಜ್ಞಾನ ಪಡೆದುಕೊಳ್ಳಬೇಕು. ಅದಕ್ಕಾಗಿ ಹುಡುಕಾಟವೂ ಬೇಕು. ಯಾವುದೂ ನಮ್ಮನ್ನು ಅರಸಿಕೊಂಡು ಬರುವ ಕಾಲ ಇದಲ್ಲ. ನಮಗೆ ಬೇಕಾಗಿರುವುದನ್ನು ನಾವೇ ಅರಸಿಕೊಂಡು ನಡೆಯಬೇಕು. ಒಳ್ಳೆಯ ಚಿಂತನೆ ಇದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಎಸ್.ಎಂ. ಸಿತಾಳದ, ಶಿಕ್ಷಣದಿಂದಲೇ ಹಳ್ಳಿಗಳ ಉದ್ಧಾರ ಸಾಧ್ಯ. ಅಂತರ್ ರಾಜ್ಯ ರಾಷ್ಟ್ರಗಳಲ್ಲಿಯೂ ನಮಗೆ ಒಳ್ಳೆಯ ಉದ್ಯೋಗಗಳ ಅವಕಾಶವಿದೆ ಎಂದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಶಿವಯೋಗಿ ಒಡೆಯರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿಯ ಸದಸ್ಯರಾದ ಶೇಕಪ್ಪ ಬಮ್ಮನಹಳ್ಳಿ, ನಾಗರಾಜ ಬೈರೋಜಿ, ಸಮಿವುಲ್ಲಾ ಲೋಹಾರ, ಗಣೇಶ ಹಳ್ಳೇರ, ಗ್ರಾಪಂ ಅಧ್ಯಕ್ಷೆ ಅಫರೋಜಾ ಕನವಳ್ಳಿ, ಉಪಾಧ್ಯಕ್ಷ ಕುಮಾರ ಲಕಮೋಜಿ, ಸದಸ್ಯರಾದ ಸುಶೀಲಾ ತಳವಾರ, ನಾಗರತ್ನಾ ಚನ್ನಾಪುರ, ರೇಖಾ ಕುರುಬರ, ಲಕ್ಷ್ಮೀ ಪಾಟೀಲ, ಪುಷ್ಪಾ ನಿಟ್ಟೂರ, ಕಲ್ಪನಾ ಚಲವಾದಿ ಅತಿಥಿಗಳಾಗಿದ್ದರು.ಉಪನ್ಯಾಸಕರಾದ ಎಂ.ಎಸ್. ಹೊಸಅಂಗಡಿ ಸ್ವಾಗತಿಸಿದರು. ನೀಲಮ್ಮ ಪೂಜಾರ ಅತಿಥಿಗಳನ್ನು ಪರಿಚಯಿಸಿದರು. ಡಾ. ಲತಾ ಕೋಪರ್ಡೆ ಪ್ರಾಸ್ತಾವಿಕ ಮಾತನಾಡಿದರು. ಶಾಂತಪ್ಪ ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಹನುಮಂತ ಅನ್ವೇರಿ ವಂದಿಸಿದರು.