- ತರೀಕೆರೆ ಸರ್ಕಾರಿ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನೆ
ಶಿಕ್ಷಣ ವಿದ್ಯಾರ್ಥಿಗಳನ್ನು ವಿಕಾಸಗೊಳಿಸುವ ಕ್ರಿಯೆಯಾಗಿದ್ದು ಎಲ್ಲರೂ ಸತ್ಪ್ರಜೆಗಳಾಗಬೇಕು ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರಾದ ಡಾ.ಶುಭಾ ಮರವಂತೆ ಹೇಳಿದ್ದಾರೆ.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಏರ್ಪಡಿಸಿದ್ದ 2026-27ನೇ ಶೈಕ್ಷಣಿಕ ಸಾಲಿನ ವಿವಿಧ ಘಟಕಗಳಾದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ಯುವ ರೆಡ್ ಕ್ರಾಸ್, ಮಹಿಳಾ ಸಬಲೀಕರಣ ಕೋಶ, ಇಕೋ ಕ್ಲಬ್, ಐಕ್ಯೂಎಸಿ ಹಾಗೂ ಪಿ ಎಂ ಉಷಾ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪ್ರೀತಿ, ಶಾಂತಿ, ವಿಶ್ವಾಸ , ಮಾನವೀಯತೆ ಹಾಗೂ ಸೇವಾ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವ ಅಗತ್ಯವಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕ ಓದುವಂತೆ ಅವರು ಪ್ರೋತ್ಸಾಹಿಸಿದರು.
ಪ್ರಾಂಶುಪಾಲ ಡಾ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಶಿವರುದ್ರಪ್ಪ ಎಚ್. ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. 2025-26ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಲ್ಲಾ ಕೋರ್ಸ್ ವಿದ್ಯಾರ್ಥಿಗಳಿಗೆ ದತ್ತಿನಿಧಿ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ನಗದು ಬಹುಮಾನ ನೀಡಲಾಯಿತು. ಸಂಪತ್ ಕುಮಾರ್ ಡಾ. ವೇದಾನಂದ ಪ್ರಭು ಎಲ್ಲಾ ಅಧ್ಯಾಪಕ ವರ್ಗ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆದ ಕಾರ್ಯಕ್ರಮವನ್ನು ಶಿವಮೊಗ್ಗ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರಾದ ಡಾ.ಶುಭಾ ಮರವಂತೆ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಮಂಜುನಾಥ್ ಮತ್ತಿತರರು ಇದ್ದರು.