;Resize=(412,232))
ಬೆಂಗಳೂರು : ಸಿಲ್ಕ್ ಬೋರ್ಡ್ ಫ್ಲೈಓವರ್ ಸೇರಿದಂತೆ ನಗರದ ಮೇಲ್ಸೇತುವೆ ಕೆಳಭಾಗದ ಗೋಡೆಗಳ ಸುಂದರೀಕರಣಕ್ಕೆ ಅನುದಾನ ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ಜಿಬಿಎ ಹಮ್ಮಿಕೊಂಡಿರುವ ‘ಜಸ್ಟ್ ಕ್ಲೀನ್ ಬೆಂಗಳೂರು’ ಅಭಿಯಾನದ ಭಾಗವಾಗಿ ಸಿಲ್ಕ್ ಬೋರ್ಡ್ ಫ್ಲೈಓವರ್ ಕೆಳಭಾಗ ಸಿಲ್ಕ್ ಥೀಮ್‌ನಲ್ಲಿ ಗೋಡೆಗಳಿಗೆ ಆಕರ್ಷಕ ಬಣ್ಣ ಬಳಿದ ನಂತರ ಮಾತನಾಡಿದ ಅವರು, ನಗರದ ಸೌಂದರ್ಯೀಕರಣಕ್ಕೆ ಇಂತಹ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ ಉಪಕ್ರಮಗಳು ಮಾದರಿಯಾಗಿವೆ. ಸಿಲ್ಕ್ ಬೋರ್ಡ್ ಜಂಕ್ಷನ್ ಜೊತೆಗೆ ಡೈರಿ ಸರ್ಕಲ್ ಫ್ಲೈಓವರ್ ಕೆಳಭಾಗವನ್ನೂ ಇದೇ ಮಾದರಿಯಲ್ಲಿ ಸುಂದರೀಕರಣಗೊಳಿಸಲು ತಮ್ಮ ಶಾಸಕರ ಅನುದಾನದಿಂದ ಅಗತ್ಯ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದರು.
ಅಲ್ಲದೆ, ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಹೊರವರ್ತುಲ ರಸ್ತೆಯ ಫ್ಲೈಓವರ್‌ಗಳಾದ ಬೆಳ್ಳಂದೂರು, ಇಬ್ಬಲೂರು, ಆಗರ, ಎಚ್.ಎಸ್.ಆರ್ ಲೇಔಟ್ ಹಾಗೂ ಮಹದೇವಪುರ ಕೆಳಭಾಗದಲ್ಲೂ ಸಾರ್ವಜನಿಕ ಸ್ಥಳಗಳ ಪುನಶ್ಚೇತನ ಕಾರ್ಯವನ್ನು ಇಂಡಿಯಾ ರೈಸಿಂಗ್ ಟ್ರಸ್ಟ್ ಸಹಯೋಗದೊಂದಿಗೆ ಹಂತ-ಹಂತವಾಗಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಮಾತನಾಡಿ, ಈ ಸ್ಥಳವು ಸಾರ್ವಜನಿಕರಿಗೆ ಪೂರ್ಣ ಪ್ರಮಾಣದಲ್ಲಿ ಉಪಯುಕ್ತವಾಗುವಂತೆ ರೂಪಿಸಬೇಕು. ಫ್ಲೈಓವರ್ ಮತ್ತೊಂದು ಬದಿಯ ಕೆಳಭಾಗದಲ್ಲಿ ವಾಹನ ಸವಾರರ ಅಡ್ಡಾದಿಡ್ಡಿ ಪಾರ್ಕಿಂಗ್ ತಪ್ಪಿಸಲು ವ್ಯವಸ್ಥಿತ ಪಾರ್ಕಿಂಗ್, ಆಟದ ಜಾಗ, ಪ್ರತ್ಯೇಕ ವೆಂಡಿಂಗ್ ಝೋನ್ ಹಾಗೂ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಿದರು.
‘ಇಂಡಿಯಾ ರೈಸಿಂಗ್ ಟ್ರಸ್ಟ್’ ಎನ್‌ಜಿಒ ಸಹಯೋಗದೊಂದಿಗೆ ಸಿಜಿಐ ಕಂಪನಿಯ ಸಿಎಸ್ಆರ್ ಯೋಜನೆಯಡಿ ಗೋಡೆ ಸುಂದರೀಕರಣ ಹಾಗೂ ವಾಲ್ ಪೇಂಟಿಂಗ್ ಅಭಿಯಾನದಲ್ಲಿ ಸುಮಾರು 60ಕ್ಕೂ ಹೆಚ್ಚು ಸಿಜಿಐ ಸಂಸ್ಥೆ ನೌಕರರು ಸ್ವಯಂಸೇವಕರಾಗಿ ಪಾಲ್ಗೊಂಡು ವಾಲ್ ಪೇಂಟಿಂಗ್ ಕಾರ್ಯವನ್ನು ನೆರವೇರಿಸಿದರು.
ಈ ವೇಳೆ ಬೊಮ್ಮನಹಳ್ಳಿ ವಲಯದ ಮುಖ್ಯಎಂಜಿನಿಯರ್ ಮಾಲತಿ, ಸ್ವಚ್ಛ ಬೆಂಗಳೂರು-ಜಿಬಿಎ ರಾಯಭಾರಿ ಹಾಗೂ ಇಂಡಿಯಾ ರೈಸಿಂಗ್ ಟ್ರಸ್ಟ್‌ನ ಅರುಣ್ ಪೈ, ಇಂಡಿಯಾ ರೈಸಿಂಗ್ ಟ್ರಸ್ಟ್‌ನ ವಿನ್ಯಾಸಕಾರ ಅನಿರುದ್ಧ ಅಭ್ಯಂಕರ್ ಉಪಸ್ಥಿತರಿದ್ದರು.
ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಪೂರಕವಾಗಿ ರೇಷ್ಮೆ ಸೀರೆಗಳ ಸಾಂಪ್ರದಾಯಿಕ ವಿನ್ಯಾಸಗಳಾದ ದೇವಸ್ಥಾನದ ಬಾರ್ಡರ್ (ಟೆಂಪಲ್ ಬಾರ್ಡರ್), ಮಾವಿನಕಾಯಿ ಮೋಟಿಫ್ (ಮ್ಯಾಂಗೋಮೋಟಿಫ್) ಹಾಗೂ ನವಿಲಿನ ಆಕರ್ಷಕ ಕಲಾಕೃತಿಗಳನ್ನು ಫ್ಲೈಓವರ್ ಗೋಡೆ ಮತ್ತು ಪಿಲ್ಲರ್‌ಗಳ ಮೇಲೆ ಬಿಡಿಸಿ ಬಣ್ಣ ಬಳಿಯುವ ಮೂಲಕ ಜಂಕ್ಷನ್ ಉತ್ತಮವಾಗಿ ಕಾಣುವಂತೆ ಮಾಡಲಾಯಿತು.