ಜೀವನದ ದೃಷ್ಟಿಕೋನ ರೂಪಿಸುವ ಪ್ರಕ್ರಿಯೆಯೇ ಶಿಕ್ಷಣ: ಡಾ.ಅಲಗೂರ್

KannadaprabhaNewsNetwork |  
Published : Nov 10, 2025, 02:00 AM IST
ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ೧೫ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ | Kannada Prabha

ಸಾರಾಂಶ

ನಿಟ್ಟೆ ಕ್ಯಾಂಪಸ್‌ನಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ೧೫ನೇ ಘಟಿಕೋತ್ಸವ ನಡೆಯಿತು. ಕೇರಳ ಕೇಂದ್ರೀಯ ವಿ.ವಿ. ಉಪಕುಲಪತಿ ಪ್ರೊ. (ಡಾ.) ಸಿದ್ದು ಪಿ. ಅಲಗೂರ್ ಭಾಗವಹಿಸಿ ಮಾತನಾಡಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ೧೫ನೇ ಘಟಿಕೋತ್ಸವ

ಕನ್ನಡಪ್ರಭ ವಾರ್ತೆ ಕಾರ್ಕಳ

ಶಿಕ್ಷಣ ಎಂದರೆ ಕೇವಲ ಜ್ಞಾನ ಸಂಪಾದನೆಯಲ್ಲ. ವ್ಯಕ್ತಿಯ ಚಿಂತನೆ, ನೈತಿಕತೆ ಹಾಗೂ ಜೀವನದ ದೃಷ್ಟಿಕೋನ ರೂಪಿಸುವ ಪ್ರಕ್ರಿಯೆ. ಅದು ತರಗತಿಯ ಕೋಣೆಗೆ ಸೀಮಿತವಾಗಿರದೆ, ಅಂಕ ಅಥವಾ ಪ್ರಮಾಣಪತ್ರಗಳಿಂದ ಅಳೆಯಲಾಗದ ಪರಿವರ್ತನೆ ಎಂಬುದಾಗಿ ಕೇರಳ ಕೇಂದ್ರೀಯ ವಿ.ವಿ. ಉಪಕುಲಪತಿ ಪ್ರೊ. (ಡಾ.) ಸಿದ್ದು ಪಿ. ಅಲಗೂರ್ ಹೇಳಿದರು.ಶನಿವಾರ ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ೧೫ನೇ ಘಟಿಕೋತ್ಸವದಲ್ಲಿ ಮಾತನಾಡಿದರು.ನಿಜವಾದ ಶಿಕ್ಷಣ, ಏನು ಯೋಚಿಸಬೇಕು ಎನ್ನುವುದಕ್ಕಿಂತ ಹೇಗೆ ಯೋಚಿಸಬೇಕು ಎಂಬುದನ್ನು ಕಲಿಸುತ್ತದೆ. ಪ್ರಶ್ನಿಸುವ ಮನೋಭಾವ, ಸ್ಪರ್ಧೆಯನ್ನು ಬೆಳೆಸುತ್ತದೆ. ಕೃತಕ ಬುದ್ಧಿಮತ್ತೆ, ಡೇಟಾಗಳ ದಿನಗಳಲ್ಲಿ ಜ್ಞಾನ ಅಗಾಧವಾಗಿದ್ದು ತಂತ್ರಜ್ಞಾನವು ವರ್ಚುವಲ್ ಹಾಗೂ ನೈಜ ಜೀವನದ ನಡುವಿನ ಅಂತರವನ್ನು ಮಂಕಾಗಿಸಿದೆ. ಶಿಕ್ಷಣವು ಪದವಿ ಗಳಿಕೆಗೆ ಮಾತ್ರ ಸೀಮಿತವಲ್ಲ, ಅದು ಜೀವನದ ಪಯಣವಾಗಿದೆ. ಹೊಸ ಶತಮಾನದಲ್ಲಿ ಡಿಜಿಟಲ್ ಸಾಕ್ಷರತೆಯ ಜೊತೆಗೆ ನೈತಿಕ ಸ್ಪಷ್ಟತೆ, ತಾಂತ್ರಿಕ ಪರಿಣತಿಯೊಂದಿಗೆ ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಜಾಗತಿಕ ಅರಿವಿನ ಜೊತೆಗೆ ಸ್ಥಳೀಯ ಬದ್ಧತೆಯೂ ಅಗತ್ಯ. ಜಗತ್ತಿಗೆ ಬುದ್ಧಿವಂತ ಮನಸ್ಸುಗಳು ಮಾತ್ರವಲ್ಲ, ಸಹಾನುಭೂತಿಯುಳ್ಳ ಹೃದಯಗಳೂ ಬೇಕು ಎಂದವರು ಪ್ರತಿಪಾದಿಸಿದರು.ನಿಟ್ಟೆ ವಿ.ವಿ. ಸಹಕುಲಾಧಿಪತಿ (ಆಸ್ಪತ್ರೆ ನಿರ್ವಹಣೆ) ಡಾ.ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ, ವಿಜ್ಞಾನವು ನಮಗೆ ಹೊಸದರ ಆವಿಷ್ಕಾರದ ಕಲ್ಪನೆಯನ್ನು ನೀಡುತ್ತದೆ. ತಾಂತ್ರಿಕ ಜ್ಞಾನವು ಉಪಕರಣವನ್ನು ಆವಿಷ್ಕರಿಸಲು ಸಹಾಯಮಾಡುತ್ತದೆ. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಗುಣ ನಡತೆಯನ್ನು ನೀಡುವುದು ಶಿಕ್ಷಣ ಸಂಸ್ಥೆಯ ಆದ್ಯಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಸಹಕುಲಾಧಿಪತಿ (ಆಡಳಿತ) ವಿಶಾಲ್ ಹೆಗ್ಡೆ, ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ, ಎಕ್ಸಿಕ್ಯೂಟಿವ್ ಕೌಂನ್ಸಿಲ್ ಸದಸ್ಯ ಡಾ. ಚಂದ್ರಶೇಖರ್ ಶೆಟ್ಟಿ, ಕುಲಸಚಿವ ಡಾ. ಹರ್ಷಾ ಹಾಲಹಳ್ಳಿ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಬಿ. ಶೆಟ್ಟಿ, ನಿಟ್ಟೆ ಆಫ್ ಕ್ಯಾಂಪಸ್‌ನ ವಿವಿಧ ಕಾಲೇಜುಗಳ ಮುಖ್ಯಸ್ಥರು, ಎಕಾಡೆಮಿಕ್ ಕೌಂಸಿಲ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಫ್ ಕ್ಯಾಂಪಸ್ ಸೆಂಟರ್‌ನ ಪರೀಕ್ಷಾ ನಿಯಂತ್ರಕ ಡಾ. ಸುಬ್ರಹ್ಮಣ್ಯ ಭಟ್ ಕೆ. ಘಟಿಕೋತ್ಸವ ಸಮಾರಂಭದ ಮೆರವಣಿಗೆಯನ್ನು ಮುನ್ನಡೆಸಿದರು.೬೪೬ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:

ಈ ಸಂದರ್ಭ ವಿವಿಧ ನಿಕಾಯಗಳ ಸುವರ್ಣ ಪದಕ ವಿಜೇತರನ್ನು ಗೌರವಿಸಲಾಯಿತು. ೬೪೬ ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ ೩೮ ಮಂದಿ ಮಾಸ್ಟರ್ ಆಫ್ ಟೆಕ್ನಾಲಜಿ, ೧೭೮ ಮಂದಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಹಾಗೂ ೧೭೯ ಮಂದಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಗಳನ್ನು ಪಡೆದರು. ಪದವಿ ವಿಭಾಗದಲ್ಲಿ ೫೨ ವಿದ್ಯಾರ್ಥಿಗಳಿಗೆ ಬಿಬಿಎ, ೫೪ ವಿದ್ಯಾರ್ಥಿಗಳಿಗೆ ಬಿಕಾಂ, ೫೧ ವಿದ್ಯಾರ್ಥಿಗಳಿಗೆ ಬಿಕಾಂ (ಪ್ರೊಫೆಶನಲ್), ೬೫ ವಿದ್ಯಾರ್ಥಿಗಳಿಗೆ ಬಿಸಿಎ ಹಾಗೂ ೨೯ ವಿದ್ಯಾರ್ಥಿಗಳಿಗೆ ಬಿಎಸ್ಸಿ(ಡೇಟಾ ಎನಾಲಿಟಿಕ್ಸ್) ಪದವಿಯನ್ನು ನೀಡಲಾಯಿತು.

ಪ್ರಾಧ್ಯಾಪಕ ಹಾಗೂ ಇಂಡಿಯನ್ ನಾಲೆಜ್ ಸಿಸ್ಟಮ್ ಸೆಂಟರ್ ನ ನಿರ್ದೇಶಕ ಡಾ.ಸುಧೀರ್ ರಾಜ್ ಕೆ. ಮತ್ತು ಸಹಾಯಕ ಪ್ರಾಧ್ಯಾಪಕಿ ಪ್ರೇಮಿತಾ ಕಾಮತ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ