ದಯಾಸಾಗರ್ .ಎನ್.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಈ ಬಾರಿಯ 2026-27ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಏನು ಸಿಗಲಿದೆ ಎಂದು ಅವಳಿ ಜಿಲ್ಲೆಯ ಜನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಜಿಲ್ಲೆಯ ಮೂಲ ಸಮಸ್ಯೆ ಕುಡಿಯುವ ಹಾಗೂ ಕೃಷಿಗೆ ಅಗತ್ಯ ನೀರಿನ ಕೊರತೆ. ಎತ್ತಿನಹೊಳೆ ಕಾಮಗಾರಿ ಇವೇ ಮೊದಲಾದ ಯೋಜನೆಗಳಿಗೆ ಅನುದಾನ ಜನರ ಬೇಡಿಕೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ಸಲುವಾಗಿ 2013ರಲ್ಲಿ 8 ಸಾವಿರ ಕೋಟಿ ರು.ಗಳ ಅಂದಾಜು ಮೊತ್ತದಲ್ಲಿ ಆರಂಭವಾಗಿದ್ದ ಎತ್ತಿನಹೊಳೆ ಯೋಜನೆ ಕಾಮಗಾರಿ 12 ವರ್ಷಗಳಾದರೂ ಕುಂಟುತ್ತಾ ಸಾಗಿದೆ. ಈಗಾಗಲೇ ಯೋಜನೆಯು 30 ಸಾವಿರ ಕೋಟಿಗಳಷ್ಟಾಗಿದ್ದು, ಈಗಾಗಲೇ 20 ಸಾವಿರ ಕೋಟಿ ರು.ಗಳಿಗೂ ಅಧಿಕ ಹಣ ಖರ್ಚಾಗಿದೆ. 2027 ರಲ್ಲಿ ಕಾಮಗಾರಿ ಮುಗಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಹೀಗಾಗಿ ಈ ಬಾರಿ ಈ ಯೋಜನೆಗೆ ಬಜೆಟ್‌ನಲ್ಲಿ ಸಿಂಹಪಾಲು ಅನುದಾನದ ನಿರೀಕ್ಷೆ ಇದೆ.ಚಿಕ್ಕಬಳ್ಳಾಪುರ ಜಿಲ್ಲೆಗೆ ಬರುವ ಎಚ್.ಎನ್. ವ್ಯಾಲಿ ನೀರನ್ನು ಮೂರನೇ ಹಂತ ಶುದ್ಧೀಕರಣ ಮಾಡಬೇಕು ಎಂದು ಜಲ ತಜ್ಞರು, ಸಂಶೋಧನಾಕಾರರು, ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಇದು ಕುಡಿಯಲು ಹಾಗೂ ಬಳಸಲು ಯೋಗ್ಯವಲ್ಲದ ನೀರು. ಹೀಗಾಗಿ 3ನೇ ಹಂತದಲ್ಲಿ ನೀರು ಶುದ್ಧೀಕರಿಸಿ, ಹರಿಸಿ ಎಂಬ ಬೇಡಿಕೆ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ. ಅಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರೋ ವಿಶ್ವವಿಖ್ಯಾತ ನಂದಿ ಬೆಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಚಿಕ್ಕಬಳ್ಳಾಪುರ ಪೋನ್ ಬಿಡಿಭಾಗಗಳ ತಯಾರಿಕಾ ಕೈಗಾರಿಕೆ ಹಾಗು ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನಕ್ಕಾಗಿ ಕಾಯುತ್ತಿದ್ದಾರೆ.
ಹೂವಿನ ಮಾರುಕಟ್ಟೆ, ಹೈಟೆಕ್ ರೇಷ್ಮೇ ಮಾರುಕಟ್ಟೆ, ಮಾವು ಹಾಗೂ ಟೊಮ್ಯಾಟೋ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕಗಳ ಆರಂಭ, ಚಿಂತಾಮಣಿಯಲ್ಲಿ ಖಾಸಗಿ ಸಹಭಾಗಿತ್ವ ಬದಲು ಸರ್ಕಾರಿ ಮೆಡಿಕಲ್ ಕಾಲೇಜು, ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ಎಲ್ಲಾ ನಗರಗಳ ಅಭಿವೃದ್ಧಿಗೆ ವಿಶೇಷ ಅನುದಾನ, ಟ್ರಾಫಿಕ್ ಸಮಸ್ಯೆ ನಿವಾರಣೆಗೆ ರಿಂಗ್ ರಸ್ತೆ, ರೈಲ್ವೇ ಪ್ಲೈ ಓವರ್ ನಿರ್ಮಾಣ, ಕೆರೆಗಳ ಅಭಿವೃದ್ಧಿಗೆ ಹಣ ಸಿಗಲಿ ಎಂದು ಜನರ ಆಶಯವಾಗಿದೆ.
ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆರಂಭವಾಗಿ ಐದು ವರ್ಷ ಕಳೆದಿದ್ದು, ಇಲ್ಲಿ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿದಿದ್ದು, ಆಸ್ಪತ್ರೆ ಪ್ರಾರಂಭವಾಗಬೇಕಿದೆ. ನಗರಗಳಿಗೆ ವಿಶೇಷ ಅನುದಾನ ಘೋಷಣೆಗೆ ಒತ್ತಾಯವೂ ಇದೆ. ನಗರ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ರಿಂಗ್ ರಸ್ತೆಗಳು ಹಾಗೂ ಪ್ಲೈ ಓವರ್ ನಿರ್ಮಾಣಕ್ಕೆ ಅನುದಾನ ಘೋಷಣೆ ಸಾಧ್ಯತೆಯಿದೆ.
ಜಿಲ್ಲೆಗೆ ಬೃಹತ್ ಕೈಗಾರಿಕೆಗಳು, ದ್ರಾಕ್ಷಿ ಸಂಗ್ರಹಣೆ ಮಾಡುವ ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಹೂವಿನ ಮಾರುಕಟ್ಟೆಗೆ ಹೆಚ್ಚುವರಿ ಹಣ ಬಿಡುಗಡೆ, ರೇಷ್ಮೆಗೆ ಹೆಸರುವಾಸಿಯಾಗಿರುವ ಈ ಶಿಡ್ಲಘಟ್ಟಕ್ಕೆ ಕಳೆದ ವರ್ಷ ನವೆಂಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶಿಡ್ಲಘಟ್ಟ ಕ್ಷೇತ್ರದಲ್ಲಿ ರೇಷೇ ಹೈಟೆಕ್ ಮಾರುಕಟ್ಟೆಯನ್ನು ಉದ್ಘಾಟನೆ ನೆರೆವೇರಿಸಿದರು. ಆ ಸಮಯದಲ್ಲಿ ರೇಷೇ ಉದ್ಯಮದಾರರಿಗೆ ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡಲಾಗುವುದು ಎಂದು ಹೇಳಿದರು .ಆದರೆ ಸಿದ್ದರಾಮಯ್ಯ ಅವರು ಹೇಳಿದಂತೆ ಅದು ಆಗುತ್ತದೆ ಎಂದು ಉದ್ಯಮದಾರರು ನಂಬಿದ್ದಾರೆ.ಘಂಟಲಮಲ್ಲಮ್ಮ ಡ್ಯಾಮ್ ನಿರ್ಮಾಣಕ್ಕೆ 200 ಕೋಟಿ ರು.ಗಳ ಅನುದಾನ ಸಿಗುತ್ತೆ ಎಂಬ ವಿಶ್ವಾಸದಲ್ಲಿ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಘಂಟಲಮಲಮ್ಮ ಡ್ಯಾಂಗೆ ಅನುದಾನ ನೀಡುತ್ತಾರೆನ್ನುವ ನಿರೀಕ್ಷೇ ಹುಸಿ ಯಾಗಿತ್ತು. ಈ ಅವಧಿ ಬಜೆಟ್‌ನಲ್ಲಿ ಸಿಕ್ಕುವ ನಿರೀಕ್ಷೇ ಇದೆ.
ಗೌರಿಬಿದನೂರಿನ ತಾಲೂಕಿಗೆ ಹೈಟೆಕ್ ಆಸ್ವತ್ರೆ, ಬಸ್ ನಿಲ್ದಾಣ, ಕೈಗಾರಿಕೆಗಳು ಬೇಕಾಗಿದೆ. ಮಂಚೇನಹಳ್ಳಿ ಮತ್ತು ಚೇಳೂರು ಅಗ್ನಿಶಾಮಕ ಠಾಣೆಗಳು ಈ ಎರಡು ತಾಲೂಕುಗಳಿಗೆ ಇಲ್ಲ. ಈ ಎರಡು ತಾಲೂಕುಗಳಿಗೆ ನೂತನ ಅಗ್ನಿಶಾಮಕ ಠಾಣೆಗಳನ್ನು ಈ ಬಜೆಟ್‌ನಲ್ಲಿ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.2026ರ ರಾಜ್ಯ ಬಜೆಟ್ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಬೆಟ್ಟದಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಇದರಲ್ಲಿ ಯಾವ ಭರವಸೆ ಈಡೇರುತ್ತೆ. ಯಾವುದು ಹುಸಿಯಾಗುವುದು ಕಾದುನೋಡಬೇಕು.
ಸಿಕೆಬಿ-2 ಕಾಮಗಾರಿ ಮುಗಿದು ಉದ್ಘಾಟನೆಗೆ ಕಾದಿರುವ ನಂದಿ ಮೆಡಿಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿರುವ ಆಸ್ಪತ್ರೆ ಕಟ್ಟಡ