ರಾಮನಗರ: ನಗರಸಭೆ 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದ ಶೇಕಡ 80ರಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದೇವೆ. ಜನರಿಗೆ ನೀಡಿದ ವಾಗ್ದಾನಗಳನ್ನು ಈಡೇರಿಸಿ ನುಡಿದಂತೆ ನಡೆಯುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದಸ್ಯರು ಮತ್ತು ಅಧಿಕಾರಿಗಳ ಸಹಕಾರದಿಂದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದು, ಶೀಘ್ರದಲ್ಲಿಯೇ ಉಳಿದ ಕಾರ್ಯಗಳಿಗೂ ಚಾಲನೆ ಸಿಗಲಿದೆ. ಈ ಬಾರಿಯ ಬಜೆಟ್ ನಲ್ಲಿ ನಗರದ ಅಭಿವೃದ್ಧಿಗೆ ಪೂರಕ ಹೊಸ ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದರು.ಎಸ್ ಬಿಎಂ(1.0) ಯೋಜನೆಯಲ್ಲಿ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಎಸ್‌ಬಿಎಂ (2.0)ಯೋಜನೆ ಅಡಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಪಾರಂಪರಿಕ ತ್ಯಾಜ್ಯದ ಸಂಸ್ಕರಣಾ ಕಾಮಗಾರಿಗಳ ನಿರ್ವಹಣೆ ಮಾಡಲಾಗುತ್ತಿದೆ. ಯುಐಡಿಎಫ್ ಯೋಜನೆಯಡಿ 82 ಕೋಟಿಗಳ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.
ನಗರಸಭೆಯನ್ನು ಗ್ರೇಡ್ 2ರಿಂದ ಗ್ರೇಡ್ 1 ನಗರಸಭೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ಲಾಸ್ಟಿಕ್ ಗೆ ಪರ್ಯಾಯ ಮಾರ್ಗವಾಗಿ 10 ಸಾವಿರ ಬಟ್ಟೆ ಕೈಚೀಲಗಳನ್ನು ಮಹಿಳೆಯರಿಗೆ ವಿತರಿಸಲಾಗಿದೆ. ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ರೇಷ್ಮೆ ನಾಡ ಕನ್ನಡ ಹಬ್ಬ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ವಿವಿಧ ಕ್ಷೇತ್ರಗಳ 17 ಸಾಧಕರಿಗೆ ಶ್ರೀ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ ಮಾಡುವ ಹೊಸ ಪರಂಪರಿಗೆ ನಾಂದಿ ಹಾಡಿದ್ದೇವೆ ಎಂದರು.ಎಸ್‌ಎಫ್‌ಸಿ ಮತ್ತು ನಗರಸಭಾ ನಿಧಿಯಿಂದ ಎಸ್ಸಿ ಎಸ್ಟಿ ಜನಾಂಗದ ಕಲ್ಯಾಣ ಕಾರ್ಯಕ್ರಮಗಳಿಗೆ 60 ಲಕ್ಷ, ಬಡಜನರ ಅಭಿವೃದ್ಧಿಗಾಗಿ 30 ಲಕ್ಷ, ವಿಶೇಷಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ 15 ಲಕ್ಷ ಮೀಸಲಿರಿಸಲಾಗಿದೆ. ಈ ಅನುದಾನದಲ್ಲಿ ಶಸ್ತ್ರ ಚಿಕಿತ್ಸೆ, ವೈದ್ಯಕೀಯ ವೆಚ್ಚ, ಆರೋಗ್ಯ ವಿಮೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಇತರೆ ಕಾರ್ಯಕ್ರಮಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಕ್ರಿಯಾಯೋಜನೆ ತಯಾರಿಸಿ ಜಾರಿಗೊಳಿಸಲಾಗಿದೆ ಎಂದರು.
ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸಗಳ ಪ್ರವೇಶ ಪರೀಕ್ಷೆಗಳಾದ ಸಿಇಟಿ, ಜೆಇಇ, ಎನ್ ಇಇಟಿ ಪರೀಕ್ಷಾ ತರಬೇತಿ ಕೇಂದ್ರದಲ್ಲಿ 150 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಡೇ ನಲ್ಮ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, 1 ಸಾವಿರ ಛತ್ರಿಗಳು, ಸವಿತಾ ಸಮಾಜ ಮತ್ತು ಮಡಿವಾಳ ಸಮಾಜ ವೃತ್ತಿ ನಿರತರಿಗೆ ಕಿಟ್ ನೀಡಲಾಗಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 10 ಸಾವಿರ ರು.ಗಳಂತೆ 1622 ಬೀದಿ ಬದಿ ವ್ಯಾಪಾರಿಗಳಿಗೆ 162.20 ಲಕ್ಷ ರು., 20 ಸಾವಿರದಂತೆ 726 ಬೀದಿ ಬದಿ ವ್ಯಾಪಾರಿಗಳಿಗೆ 145.20 ಲಕ್ಷ, 50 ಸಾವಿರದಂತೆ 237 ಬೀದಿ ಬದಿ ವ್ಯಾಪಾರಿಗಳಿಗೆ 118.50 ಲಕ್ಷ ಸಾಲಸೌಲಭ್ಯ ನೀಡಲಾಗಿದೆ. ಪಿಎಂ ಜೀವನ್ ಜ್ಯೋತಿ ವಿಮಾ ಯೋಜನೆ ಅಡಿಯಲ್ಲಿ 1702 ಬೀದಿ ಬದಿ ವ್ಯಾಪಾರಿಗಳು ಹಾಗೂ ಕುಟುಂಬಸ್ಥರಿಗೆ, ಪಿಎಂ ಸುರಕ್ಷಾಭೀಮಾ ವಿಮಾ ಯೋಜನೆಯಡಿ 2219 ಬೀದಿ ಬದಿ ವ್ಯಾಪಾರಿಗಳಿಗೆ ವಿಮೆ ಮಾಡಲಾಗಿದೆ ಎಂದು ತಿಳಿಸಿದರು.
ಬಾಕಿ ಕಾರ್ಯಕ್ರಮಗಳು ಶೀಘ್ರದಲ್ಲಿ ಕಾರ್ಯರೂಪಕ್ಕೆ:
ಹಸಿರು ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ 2 ಸಾವಿರ ಗಿಡಗಳನ್ನು ನೆಡುವುದು, ಡಾ.ರಾಜ್ ಕುಮಾರ್ ಕಾಂಪ್ಲೆಕ್ಸ್ ನವೀಕರಣ, ಸಾರಿಗೆ ಬಸ್ ನಿಲ್ದಾಣದ ಬಳಿ ಮೈಸೂರು ಕಡೆ ಹೊರಡುವ ಪ್ರಯಾಣಿಕರಿಗಾಗಿ ಸ್ಮಾರ್ಟ್ ಬಸ್ ನಿಲ್ದಾಣ, ಸ್ಮಾರ್ಟ್ ಪಾರ್ಕ್ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. ನಗರದ ಪ್ರಮುಖ ಪಾರ್ಕಗಳ ಜನಸ್ನೇಹಿಯಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.ನಗರದ ಕೆಂಪೇಗೌಡ ಸರ್ಕಲ್, ರೈಲ್ವೆ ನಿಲ್ದಾಣ ವೃತ್ತದಲ್ಲಿ ಕ್ಲಾಕ್ ಟವರ್, ವಾಟರ್ ಟ್ಯಾಂಕ್ ಸರ್ಕಲ್‌ನಲ್ಲಿ ನೀರಿನ ಕಾರಂಜಿಯಿಂದ ಕೂಡಿದ ಫೌಂಟೇನ್, ಹಳೇ ಬಸ್ ನಿಲ್ದಾಣದ ಬಳಿಯಿರುವ ದಿ.ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಪ್ರತಿಮೆ ವೃತ್ತವನ್ನು ದೀಪಾಲಂಕಾರದಿಂದ ಸುಂದರೀಕರಣಗೊಳಿಸಲು ಉದ್ದೇಶಿಸಿದೆ. ಎಲ್ಲ ವಾರ್ಡುಗಳಿಗೆ ನಾಮಫಲಕ ಅಳವಡಿಸುವ ಕಾರ್ಯವನ್ನು 6 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಶೇಷಾದ್ರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೖರೋಜ್ ಪಾಷ, ಸದಸ್ಯರಾದ ಸೈಯದ್ ಅಕ್ಲಿಂ ಅಬ್ರಾರ್, ಮಹಮ್ಮದ್ ಆರೀಫ್, ನಿಜಾಮುದ್ದೀನ್ ಷರೀಫ್, ಸೋಮಶೇಖರ್, ಮುತ್ತುರಾಜು, ಗೋವಿಂದರಾಜು, ಅಜ್ಮತ್ ಉಲ್ಲಾ ಖಾನ್ , ಪವಿತ್ರ, ನಾಗಮ್ಮ, ಪಾರ್ವತಮ್ಮ , ಮಜ್ಹತ್ ಜಹಾನ್ ಇತರರಿದ್ದರು.ಕೋಟ್ ................
ಸರ್ಕಾರದ ಅನುದಾನ ಹೊರತು ಪಡಿಸಿದರೆ ನಗರಸಭೆಯ ಸ್ವಂತ ಸಂಪನ್ಮೂಲದ ಕ್ರೂಢೀಕರಣದಲ್ಲಿ ಕಟ್ಟಡ ಮತ್ತು ನಿವೇಶನಗಳ ಕಂದಾಯವನ್ನು ಸ್ವಯಂ ಘೋಷಿತ ಪದ್ಧತಿಯಂತೆ ಕಂದಾಯ ವಸೂಲಿ ಮಾಡಲಾಗುತ್ತಿದೆ. ನಗರದ ಎಲ್ಲಾ ಆಸ್ತಿಗಳ ಕರವನ್ನು ಪ್ರಾಪರ್ಟಿ ಟ್ಯಾಕ್ಸ್ ಕ್ಯಾಲ್ಕುಲೇಟರ್ ಮೂಲಕ ಸಂಪೂರ್ಣ ಆನ್‌ಲೈನ್ ತಂತ್ರಾಂಶದ ಮೂಲಕವೇ ವಸೂಲಿ ಮಾಡಲಾಗುತ್ತಿದೆ. 2025-26ನೇ ಸಾಲಿನಲ್ಲಿ ನಿರೀಕ್ಷಿತ 9 ಕೋಟಿಗಿಂತಲೂ ಹೆಚ್ಚಿನ ಕರ ವಸೂಲಿ ಮಾಡಲಾಗಿದೆ. ವ್ಯಾಪಾರ ಪರವಾನಗಿಯಿಂದ 28.65 ಲಕ್ಷ ಹಾಗೂ ಘನತ್ಯಾಜ್ಯ ಶುಲ್ಕದಿಂದ 70 ಲಕ್ಷ ಆದಾಯ ಸಂಗ್ರಹ ಮಾಡಲಾಗಿದೆ.-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ
3ಕೆಆರ್ ಎಂಎನ್ 3.ಜೆಪಿಜಿರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.