ಕನ್ನಡಪ್ರಭ ವಾರ್ತೆ ಹಾಸನ
ಶಿಕ್ಷಣದಿಂದ ದೊರೆತ ಜ್ಞಾನ ಶಾಶ್ವತವಾಗಿ ನಮ್ಮನ್ನು ಸರಿ ದಾರಿಯಲ್ಲಿ ನಡೆಸುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬಿಜಿಎಸ್ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಬಿಜಿಎಸ್-ಸ್ವಾಗತೋತ್ಸವ-೨೦೨೫ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.ತಂದೆತಾಯಿಗಳ ಶ್ರಮವರಿತು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವ ಗುಣ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಜವಾಬ್ದಾರಿ ಅರಿಯದೆ ನಡೆದುಕೊಂಡರೆ ಮುಂದಿನ ಜೀವನ ದುಸ್ತರವಾಗಲಿದೆ. ಸಂಸ್ಕಾರ ಇಲ್ಲದ ಬದುಕು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯಲಾರದು. ಹಾಗಾಗಿ ಪ್ರತಿಯೊಬ್ಬರ ಬದುಕಿನಲ್ಲಿ ಸಂಸ್ಕಾರ ಅಗತ್ಯ ಎಂದರು.ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಮಾತನಾಡಿ, ನಮ್ಮ ದೇಶದಲ್ಲಿ ಗುರು ಪರಂಪರೆಗೆ ಹೆಚ್ಚಿನ ಪ್ರಾತಿನಿಧ್ಯ ಇದೆ. ಗುರು ನಮಗೆ ಶಿಕ್ಷಣ ಕಲಿಸುವುದರೊಂದಿಗೆ ನಿಜವಾದ ದಾರಿದೀಪವಾಗಿ ನಿಲ್ಲುತ್ತಾರೆ. ಹಾಗಾಗಿ ಗುರುವನ್ನು ದೈವಿ ಭಾವನೆಯಿಂದ ನೋಡುವ ಗುಣ ನಮ್ಮೆಲ್ಲರಲ್ಲೂ ಬೆಳೆಯಬೇಕು ಎಂದರು.ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ವಿಷಯಗಳಿಗೆ ಮನಸ್ಸು ಚಂಚಲವಾಗುತ್ತದೆ. ಆದರೆ ವಿದ್ಯಾರ್ಥಿಗಳು ಒಳ್ಳೆಯ ದಾರಿಯಲ್ಲಿ ನಡೆದು ತಮ್ಮ ತಂದೆತಾಯಿಯ ಕನಸನ್ನು ನನಸು ಮಾಡಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಬೇಕು. ಆಗ ಮಾತ್ರ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಬಿಜಿಎಸ್ ಸಿಇಟಿ ಪ್ರಾಂಶುಪಾಲರಾದ ಡಾ. ರವಿ ಕುಮಾರ್, ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಮಹತ್ವಕಾಂಕ್ಷೆಯೊಂದಿಗೆ ನಾಲ್ವತ್ತು ವಿದ್ಯಾರ್ಥಿಗಳೊಂದಿಗೆ ಆರಂಭಿಸಿದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳು ಇಂದು ೫೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲೂ ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಶಿಕ್ಷಣ ಬಿತ್ತುವ ಕೆಲಸ ಮಾಡುತ್ತಿದೆ ಎಂದರು.ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ವರೂಪ್ ಮಾತನಾಡಿ, ಮುಂದೆ ಗುರಿ ಹಿಂದೆ ಗುರುವಿದ್ದಾಗ ಮಾತ್ರ ನಮ್ಮ ಬದುಕು ಸರಿ ದಾರಿಯಲ್ಲಿ ನಡೆಯುತ್ತದೆ. ಗುರುಹಿರಿಯರಿಗೆ ಗೌರವದಿಂದ ನಡೆಯುವ ಗುಣವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಆಗ ಮಾತ್ರ ಯುವ ಪೀಳಿಗೆಯು ಸರಿ ದಾರಿಯಲ್ಲಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಸದಸ್ಯ ರಘುಗೌಡ, ಬಿಜಿಎಸ್ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಮೋಹನ್, ಶ್ರೀ ಮಠದ ವ್ಯವಸ್ಥಾಪಕ ಎಚ್.ಕೆ ಚಂದ್ರಶೇಖರ್ ಕಾಲೇಜಿನ ಉಪನ್ಯಾಸಕ ವರ್ಗ, ಹಾಗೂ ಪೋಷಕಕರು ಹಾಜರಿದ್ದರು.