ಲೇಖಕಿಯರ ಸಂಘದ ಬುದ್ಧಾದೇವಿ ಸಂಗಮ ಬರೆದಿರುವ ಶಿಕ್ಷಣವೇ ಜೀವನ ಕೃತಿ ಬಿಡುಗಡೆ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ ಬೀದರ್ ಬದುಕನ್ನು ಸುಂದರಗೊಳಿಸುವುದು ಶಿಕ್ಷಣ. ಅಂತಹ ಶಿಕ್ಷಣದ ಹಲವು ಆಯಾಮಗಳನ್ನು ಈ ಪುಸ್ತಕದಲ್ಲಿ ಬುದ್ಧಾದೇವಿ ಅವರು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ಎಂ.ಜಿ.ದೇಶಪಾಂಡೆ ನುಡಿದರು. ಅಕ್ಷಯ ಪ್ರಕಾಶನ ಹಾಗೂ ಕರ್ನಾಟಕ ಲೇಖಕಿಯರ ಸಂಘದಿಂದ ಬುದ್ಧಾದೇವಿ ಅಶೋಕ ಸಂಗಮ ಅವರು ಬರೆದಿರುವ ''''''''ಶಿಕ್ಷಣವೇ ಜೀವನ'''''''' ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಒಂದು ಹೊತ್ತಿನ ಊಟ ಕಡಿಮೆ ಮಾಡಿ. ಆದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಎನ್ನುವ ಅಂಬೇಡ್ಕರರ ಮಾತು ಸ್ಮರಿಸಿದರು. ಪತಿ ಅಶೋಕ ಸಂಗಮ ಅವರು ತಮ್ಮ ಧರ್ಮಪತ್ನಿ ಬುದ್ಧಾದೇವಿಯವರ ಕೈಯಲ್ಲಿ ಲೇಖನಿ ನೀಡಿದ್ದರ ಪ್ರತಿಫಲವೇ ಈ ಕವನ ಸಂಕಲನವಾಗಿದೆ. ಹೀಗಾಗಿ ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ನುಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಉದ್ಘಾಟಿಸಿ ಮಾತನಾಡಿ, ನಮ್ಮ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದೆ. ಅದನ್ನು ಕೃತಿಗಳ ರಚನೆ ಮೂಲಕ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಕನ್ನಡ ಎಂಬುದು ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ಸಂಸ್ಕೃತಿಯಾಗಿದೆ. ಈ ನಿಟ್ಟಿನಲ್ಲಿ ಹತ್ತು ಹಲವು ವಿಷಯಗಳ ಒಳಗೊಂಡ ಶಿಕ್ಷಣವೇ ಜೀವನ ಕವನ ಸಂಕಲನ ಬುದ್ಧಾದೇವಿ ಅವರು ರಚನೆ ಮಾಡಿರುವುದು ಶ್ಲಾಘನೀಯ ಎಂದರು. ಕೃತಿ ರಚನೆಗಾರರಾದ ಬುದ್ಧಾದೇವಿ ಮಾತನಾಡಿ ನನಗೆ ನಮ್ಮ ಪತಿ ಅಶೋಕ ಸಂಗಮ ಸೇರಿದಂತೆ ಕುಟುಂಬಸ್ಥರು, ಹಾಗೂ ನಮ್ಮ ತಂದೆಯವರ ಪ್ರೇರಣ ಮೂಲ ಕಾರಣವಾಗಿದೆ. ಹೀಗಾಗಿ ಹಲವು ವಿಷಯಗಳು, ಶಿಕ್ಷಣ, ಸಂಸ್ಕಾರ, ಮಕ್ಕಳ ಜೀವನ, ಪ್ರೀತಿ-ಪ್ರೇಮ, ಸಂಬಂಧಗಳ ಬೆಲೆ ಕುರಿತು ಈ ಕವನ ಸಂಕಲನದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವೆ ಎಂದು ತಿಳಿಸಿದರು. ಪೂಜ್ಯ ಭಂತೆ ಜ್ಞಾನಸಾಗರ ಥೇರೋ, ಭಂತೆ ಸಂಘರಕ್ಕಿತ್, ಡಾ. ಸಂಜೀವಕುಮಾರ ಅತಿವಾಳೆ, ಎಂ.ಎಸ್.ಮನೋಹರ, ಪಾಂಡುರಂಗ ಬೆಲ್ದಾರ್, ಅಶೋಕ ಸಂಗಮ, ಭಾರತಿ ವಸ್ತ್ರದ, ಪಾರ್ವತಿ ಸೋನಾರೆ, ಶಿವಕುಮಾರ ಕಟ್ಟೆ, ಡಾ. ಶ್ರೇಯಾ ಮಹಿಂದ್ರಕರ್, ಡಾ. ಜಗನ್ನಾಥ ಮುತ್ತಂಗಿ, ಜಯದೇವಿ ಯದಲಾಪುರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ಕವಿಗೋಷ್ಟಿ ನಡೆಸಲಾಯಿತು. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಡಾ. ಸಂಜೀವಕುಮಾರ ಅತಿವಾಳೆ ಅವರನ್ನು ಸನ್ಮಾನಿಸಲಾಯಿತು.