ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬವಿವಿ ಸಂಘದ ಬಸವೇಶ್ವರ ಪದವಿ-ಪೂರ್ವ ವಾಣಿಜ್ಯ ಮಹಾವಿದ್ಯಾಲಯದಿಂದ ಸಂಘದ ನೂತನ ಸಭಾಭವನದಲ್ಲಿ ಜರುಗಿದ 2025-26ನೇ ಸಾಲಿನ ಪ್ರತಿಭಾ ಪುರಸ್ಕಾರ, ವಾಣಿಜ್ಯ ಸುಮನ ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿಕ್ಷಣ ಅಂಕಗಳ ಗಳಿಕೆಗೆ ಮಾತ್ರ ಸೀಮಿತವಾಗಬಾರದು. ಅದು ವ್ಯಕ್ತಿತ್ವ ನಿರ್ಮಾಣ, ನೈತಿಕ ಮೌಲ್ಯಗಳ ಬೆಳವಣಿಗೆ ಹಾಗೂ ಸಮಾಜಮುಖಿ ಚಿಂತನೆಗೆ ದಾರಿ ತೋರಿಸಬೇಕು. ಸಂಘದಲ್ಲಿ ಶಿಕ್ಷಣದ ಜೊತಗೆ ವ್ಯಕ್ತಿತ್ವ ನಿರ್ಮಾಣದಂತ ನೈತಿಕ ಮೌಲ್ಯ ಕಲಿಸುತ್ತಿರುವುದು ಹೆಮ್ಮೆಯ ಸಂಗತಿ. ವಾಣಿಜ್ಯ ಕ್ಷೇತ್ರ ದೇಶದ ಆರ್ಥಿಕ ಬೆನ್ನೆಲುಬಾಗಿದ್ದು, ಈ ಕ್ಷೇತ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬಹುದು. ಉದ್ಯಮ ಆರಂಭಿಸುವ ಧೈರ್ಯ, ಹೊಸ ಆಲೋಚನೆ ಕಾರ್ಯರೂಪಕ್ಕೆ ತರಲು ಬೇಕಾದ ಚಾತುರ್ಯ ಹಾಗೂ ಸಾಮಾಜಿಕ ಜವಾಬ್ದಾರಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಇಂದಿನ ಯುವಜನತೆ ಶಿಸ್ತು, ಸಮಯಪಾಲನೆ ಮತ್ತು ಮೌಲ್ಯಾಧಾರಿತ ಬದುಕನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಸತತ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸ್ಪಷ್ಟ ಗುರಿಯೊಂದಿಗೆ ಮುಂದುವರೆದರೆ ಯಶಸ್ಸು ಖಚಿತ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ಜಗನ್ನಾಥ ವಿ. ಚವ್ಹಾಣ, ಮಹಾವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ, ಅಧ್ಯಾಪಕರ ಶ್ರಮ ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಫಲವಾಗಿದೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಜೀವನದ ಹೊಸ ಹಂತಕ್ಕೆ ಕಾಲಿಡುತ್ತಿದ್ದು, ಆತ್ಮವಿಶ್ವಾಸ, ಮೌಲ್ಯನಿಷ್ಠೆ ಹಾಗೂ ಸಮಾಜದ ಜವಾಬ್ದಾರಿಯೊಂದಿಗೆ ಮುಂದಿನ ಪಯಣವನ್ನು ಯಶಸ್ವಿಯಾಗಿ ಸಾಗಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಾಣಿಜ್ಯ ಸುಮನ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಸಂಯೋಜಕರಾದ ಜಿ.ಎಸ್. ಶೆಲ್ಲಿಕೇರಿ ಸ್ವಾಗತಿಸಿದರು. ಬಿ.ವೈ. ಬಂಡವಾಳಕರ ಪರಿಚಯಿಸಿದರು. ಮುನೀರ್ ಹುನಗುಂದ ವಾರ್ಷಿಕ ವರದಿ ವಾಚನ ಮಾಡಿದರು. ಸುಹಾಸಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸಂಗೀತಾ ಗರಗದಮಠ ವಂದಿಸಿದರು. ಮಹಾವಿದ್ಯಾಲಯದ ಉಪನ್ಯಾಸಕರು, ಕಚೇರಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.