ಟೈಟಾನ್‌ ನಿಂದ ಶಿಕ್ಷಣ, ಕೌಶಲ್ಯ, ಕರಕುಶಲತೆಗೆ ಆದ್ಯತೆ: ಎಂಡಿ ಸಿ.ಕೆ. ವೆಂಕಟರಮಣ್‌

KannadaprabhaNewsNetwork |  
Published : Nov 30, 2024, 12:47 AM IST
26 | Kannada Prabha

ಸಾರಾಂಶ

ಕೌಶಲ್ಯದಡಿ ಮಹಿಳೆಯರ ಸ್ವಯಂ ಉದ್ಯೋಗ, ಯುವಕರಿಗೆ ಮೊಬೈಲ್‌ ರಿಪೇರಿ ಮತ್ತು ವಿವಿಧ ಯಂತ್ರೋಪಕರಣ ರಿಪೇರಿ ತರಬೇತಿ ನೀಡಲಾಗುತ್ತಿದೆ. ಸಮೀಪದ ಕೆಂಚನಹಳ್ಳಿಯಲ್ಲಿ ವಿವೇಕಾನಂದ ಸಂಸ್ಥೆ ಜೊತೆಗೂಡಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ತೆರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಟೈಟಾನ್‌ ಕಂಪನಿಯು ಶಿಕ್ಷಣ, ಕೌಶಲ್ಯ ಮತ್ತು ಕರಕುಶಲ ಕಲೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಟೈಟಾನ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಮಣ್ ತಿಳಿಸಿದರು.

ಸರಗೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಶಾಲಾ ಆವರಣದಲ್ಲಿ ಮಾತನಾಡಿದ ಅವರು, ನಮ್ಮ ಕಂಪನಿಯ ಸಿಎಸ್‌ಆರ್‌ ನಿಧಿಯಿಂದ ಮೂರು ಪ್ರಮುಖ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೌಶಲ್ಯದಡಿ ಮಹಿಳೆಯರ ಸ್ವಯಂ ಉದ್ಯೋಗ, ಯುವಕರಿಗೆ ಮೊಬೈಲ್‌ ರಿಪೇರಿ ಮತ್ತು ವಿವಿಧ ಯಂತ್ರೋಪಕರಣ ರಿಪೇರಿ ತರಬೇತಿ ನೀಡಲಾಗುತ್ತಿದೆ. ಸಮೀಪದ ಕೆಂಚನಹಳ್ಳಿಯಲ್ಲಿ ವಿವೇಕಾನಂದ ಸಂಸ್ಥೆ ಜೊತೆಗೂಡಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.

ಬೆಂಗಳೂರು, ಹೊಸೂರು ಸೇರಿದಂತೆ ಒಟ್ಟು ನಾಲ್ಕು ಕಡೆ ಕೆರೆ ಪುನರುಜ್ಜೀವನ ಯೋಜನೆ ಕೈಗೆತ್ತಿಕೊಂಡು, ಹೊಸೂರಿನಲ್ಲಿ ಉತ್ತಮವಾಗಿ ಕೆರೆ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ನಾವು ಯಾವುದೇ ಯೋಜನೆ ಕೈಗೆತ್ತಿಕೊಂಡರೂ ಕಾರ್ಯಗತಗೊಳಿಸಿ ಬಿಡದೆ, ಅದರ ಜತೆ ನಿರಂತರ ಸಂಪರ್ಕದಲ್ಲಿದ್ದು, ಪಾಲ್ಗೊಳ್ಳುತ್ತಿರುವುದರಿಂದ ಅವು ಹಲವು ವರ್ಷವಾದರು ಜೀವಂತವಾಗಿ ಉಳಿಯುತ್ತಿವೆ ಎಂದರು.

ಕಂಪನಿಯ ಮುಖ್ಯ ಅಧಿಕಾರಿ ಶ್ರೀಧರ್‌ಮಾತನಾಡಿ, ನಾವು ಒಂದು ಲಕ್ಷ ವೃಕ್ಷ ಅಭಿಯಾನ ಆಯೋಜಿಸಿದ್ದೇವೆ. ಅವುಗಳನ್ನು ಹಲವು ವರ್ಷಗಳವರೆಗೆ ಪೋಷಣೆ ಮಾಡುವ ಜವಾಬ್ದಾರಿಯನ್ನೂ ಹೊತ್ತಿದ್ದೇವೆ. ಇದು ನಮ್ಮ ಬದ್ಧತೆ. ಅಂತೆಯೇ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ಸೇರಿಂದಂತೆ ಎಲ್ಲೆಲ್ಲಿ ನಾವು ನೆರವು ನೀಡಿದ್ದೇವೆಯೋ ಅಲ್ಲೆಲ್ಲಾ ಪ್ರತಿ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ ಎಂದರು.

ಸಿಎಸ್‌ಆರ್‌ ನಿಧಿಗಾಗಿ ವರ್ಷಕ್ಕೆ 57 ಕೋಟಿ ಮೀಸಲಿಡಲಾಗುತ್ತಿದೆ ಎಂದು ಅವರು ಹೇಳಿದರು.

ಎಚ್‌.ಡಿ.ಕೋಟೆ, ಸರಗೂರು ತಾಲೂಕಿನ ವಿವಿಧೆಡೆ ಭೇಟಿ ನೀಡಿದ ಟೈಟಾನ್‌ ಎಂಡಿ

ಕನ್ನಡಪ್ರಭ ವಾರ್ತೆ ಮೈಸೂರು

ಟೈಟಾನ್‌ ಕಂಪನಿಯು ಜಿಲ್ಲೆಯಾದ್ಯಂತ ಸಮಗ್ರ ಅಭಿವೃದ್ಧಿ ಕೆಲಸ ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ಜೊತೆಗಿನ ಸಹಭಾಗಿತ್ವದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗೆ ಉಭಯ ಸಂಸ್ಥೆಯ ಮುಖ್ಯಸ್ಥರು ಭೇಟಿ ನೀಡಿದ್ದರು.

ಟೈಟಾನ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಮಣ್‌ ಮತ್ತು ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ಸಿಇಒ ಎಸ್‌. ಸವಿತಾ ಅವರು, ಎಚ್‌.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಜೊಂಪನಹಳ್ಳಿ, ಅಣ್ಣೂರು ಹಾಡಿ, ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆ ಮತ್ತು ಶಾಲೆ, ಕೆಂಚನಹಳ್ಳಿಯ ವಿವೇಕ ಗ್ರಾಮೀಣ ಜೀವನೋಪಾಯ ಕೇಂದ್ರ ಮತ್ತು ಹೊಸಹಳ್ಳಿಯ ವಿವೇಕ ಆದಿವಾಸಿಗಳ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಈ ಎರಡೂ ಸಂಸ್ಥೆಗಳು ಜತೆಗೂಡಿ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಮತ್ತು ಆರೋಗ್ಯ ಸೇವೆ ಕಲ್ಪಿಸುವ ಮೂಲಕ ಸುಮಾರು 6,110 ಮಂದಿಯ ಜೀವನದ ಮೇಲೆ ಪರಿಣಾಮ ಬೀರಿದೆ. ಈ ಎರಡೂ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಮಹತ್ತರ ಕೆಲಸ ಮಾಡಿವೆ. ಈ ಪಾಲುದಾರಿಕೆ ಮೂಲಕ ಕಳೆದ 12 ವರ್ಷಗಳಲ್ಲಿ 2,300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಪ್ರಾಯೋಜಕತ್ವ ಒದಗಿಸಲಾಗಿದೆ.

ಲಿಂಗ ಸಮಾನತೆಗೆ ಒತ್ತು ನೀಡುತ್ತಲೇ ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ಎಲ್ಲರಿಗೂ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 150 ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಜತೆಗೆ 10ನೇ ತರಗತಿ ಮುಗಿಸಿ ಉನ್ನತ ಅಭ್ಯಾಸ ಮಾಡುವವರಿಗೆ ತಮ್ಮ ಶಿಕ್ಷಣ ಮುಂದುವರೆಸಲು ಸಹಾಯ ಮಾಡಲು ವಿಟಿಸಿಎಲ್‌ನೆರವಾಗುತ್ತಿದೆ. ಸಂಸ್ಥೆಯು ವಿದ್ಯಾರ್ಥಿ ವೇತನ ಬೋಧನ ಶುಲ್ಕ, ಹಾಸ್ಟೆಲ್‌ಮತ್ತು ಸಾರಿಗೆ ಶುಲ್ಕ ಹಾಗೂ ಪುಸ್ತಕ ಅನುದಾನ ಒಳಗೊಂಡಿದೆ.ವಿವೇಕ ಸ್ಕಾಲರ್‌ಕಾರ್ಯಕ್ರಮ ಮತ್ತು ಟೈಟಾನ್‌ಕನ್ಯಾ ಯೋಜನೆ ಅಡಿಯಲ್ಲಿ ಕಲಿಯುತ್ತಿರುವ 125 ವಿದ್ಯಾರ್ಥಿಗಳಿಗೆ 12ನೇ ತರಗತಿ ಬಳಿಕ ಪದವಿ ಅಬ್ಯಾಸ ಮಾಡಲು ಟೈಟಾನ್‌ನ ಸಮಾನ ಶಿಕ್ಷಣ ಕಾರ್ಯಕ್ರಮ ಮೂಲಕ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿ ವೇತನ ಸ್ವೀಕರಿಸುವವರು ಶೇ. 75ರಷ್ಟು ಮಂದಿ ಬಾಲಕಿಯರು. ಈ ಮೂಲಕ ಮಹಿಳಾ ಶಿಕ್ಷಣ ಮತ್ತು ಸಬಲೀಕರಣ ಸಾಧ್ಯವಾಗುತ್ತಿದೆ.

ವಿವೇಕಾನಂದ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಕೇಂದ್ರವು ಈಗಾಗಲೇ ಶಿಕ್ಷಣ ಸೇವೆಯಲ್ಲಿರುವ ಶಿಕ್ಷಕರಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ಆಯೋಜಿಸುತ್ತಿದೆ. ಈವರೆಗೆ 114ಕ್ಕೂ ಹೆಚ್ಚು ಮಂದಿ ಈ ಕೋರ್ಸ್‌ಪೂರ್ಣಗೊಳಿಸಿದ್ದಾರೆ.

ಟೈಟಾನ್‌ಸಂಸ್ಥೆಯ ನೆರವಿನಲ್ಲಿ ಸರಗೂರಿನ ವಿವೇಕ ಪಿಯು ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬಾಲಕಿಯರ ಹಾಸ್ಟೆಲ್‌ನಿರ್ಮಿಸಲಾಗಿದೆ. ಟೈಟಾನ್‌ ಸಂಸ್ಥೆಯು ಸರಗೂರಿನಲ್ಲಿ ವಿವೇಕಾನಂದ ಸ್ಮಾರಕ ಆಸ್ಪತ್ರೆ ಸ್ಥಾಪನೆಗೆ ಕೂಡ ನೆರವಾಗಿತ್ತು. ಈ ಆಸ್ಪತ್ರೆಯು ಎಚ್‌.ಡಿ. ಕೋಟೆ ಮತ್ತು ಸರಗೂರು ತಾಲೂಕುಗಳ 1,129 ಮಂದಿ ಬುಡಕಟ್ಟು ಜನಾಂಗದ ಮತ್ತು 891 ಮಂದಿ ಗ್ರಾಮೀಣ ಪ್ರದೇಶದ ರೋಗಿಗಳನ್ನು ಒಳಗೊಂಡಂತೆ 2,020 ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಿದೆ.

ಈ ಕುರಿತು ಮಾತನಾಡಿದ ಟೈಟಾನ್‌ಕಂಪನಿಯ ಮುಖ್ಯ ಅಧಿಕಾರಿ ಎನ್‌.ಇ. ಶ್ರೀಧರ್‌ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ಜತೆಗಿನ ನಮ್ಮ ಸಹಭಾಗಿತ್ವದಿಂದ ಈ ಪ್ರದೇಶದ ಜನ ಸಮೂಹದಲ್ಲಿ ಉತ್ತಮ ಬದಲಾವಣೆಯಾಗಿದೆ. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಮೂಲಕ ನಾವು ಅವರ ಜೀವನವನ್ನು ಬದಲಾವಣೆಯ ಹಾದಿಯಲ್ಲಿ ಕರೆದೊಯ್ಯುವುದರ ಜೊತೆಗೆ ಉತ್ವಲ ಭವಿಷ್ಯ ನಿರ್ಮಿಸುತ್ತಿರುವುದಾಗಿ ಹೇಳಿದರು.

ಶಿಕ್ಷಣ ನೆರವು ಒದಗಿಸುವ ಜೊತೆಗೆ ವಿವೇಕ ಗ್ರಾಮೀಣ ಜೀವನೋಪಾಯ ಕೇಂದ್ರದ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಯುವಕರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ಒದಗಿಸುವ ಕಡೆಗೆ ಗಮನ ಕೇಂದ್ರೀಕರಿಸಲಾಗಿದೆ. ವಿ.ಎಲ್‌.ಸಿ ಕೇಂದ್ರದಲ್ಲಿ ಮೊಬೈಲ್‌ರಿಪೇರಿ ಮತ್ತು ಸರ್ವೀಸ್‌, ಫ್ಯಾಷನ್‌ ಡಿಸೈನಿಂಗ್‌, ಪಂಚಕರ್ಮ ಥೆರಪಿ ಮತ್ತು ಯೋಗ, ಜನರಲ್‌ ಡ್ಯೂಟಿ ಅಸಿಸ್ಟೆಂಟ್‌ ಮತ್ತು ಕೃಷಿ ಆಧಾರಿತ ತರಬೇತಿ ಮತ್ತು ಗುಂಪು ಉದ್ದಿಮೆ ಹೀಗೆ ವಿವಿಧ ರೀತಿಯ ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ.ಟೈಟಾನ್‌ನೆರವಿನಿಂದ ವಿಆರ್‌.ಎಲ್‌.ಸಿ ಕೇಂದ್ರವು ತನ್ನ ಸಮಗ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ 1,666 ವ್ಯಕ್ತಿಗಳಿಗೆ ತರಬೇತಿ ನೀಡಿದೆ. ತರಬೇತಿ ಪಡೆದವರಲ್ಲಿ ಶೇ. 83ರಷ್ಟು ಮಂದಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಇಲ್ಲಿ ಕಲಿತ ಕೌಶಲ್ಯವನ್ನು ತಮ್ಮ ಜೀವನದಲ್ಲಿ ಬದಲಿಸಲು ಬಳಸಿಕೊಂಡಿದ್ದಾರೆ. ಆರ್ಥಿಕ ವರ್ಷ 24ರಲ್ಲಿ ಈವರೆಗೆ 438 ಮಂದಿ ಪ್ರಶಿಕ್ಷಣಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದು, ಅದರಲ್ಲಿ 257 ಮಂದಿ ಯಶಸ್ವಿಯಾಗಿ ಉದ್ಯೋಗಾವಕಾಶ ಪಡೆದಿದ್ದಾರೆ ಎಂದು ಅವರು ವಿವರಿಸಿದರು.

ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ಸಿಇಒ ಎಸ್‌. ಸವಿತಾ ಮಾತನಾಡಿ, ಟೈಟಾನ್‌ಜತೆಗಿನ ಸಹಭಾಗಿತ್ವದ ಮೂಲಕ ನಾವು ಅನೇಕ ಕಾರ್ಯಕ್ರಮ ನಡೆಸಿದ್ದೇವೆ. ಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗದ ಸಮುದಾಯಕ್ಕೆ ಉಜ್ವಲ ಭವಿಷ್ಯ ಒದಗಿಸಲಾಗಿದೆ ಎಂದರು.

ಟೈಟಾನ್‌ರ ಮಾರ್ಚ್‌ತಿಂಗಳಲ್ಲಿ ಅಣ್ಣೂರು ಹಾಡಿಯಲ್ಲಿ ಬುಡುಕಟ್ಟು ಜನಾಂಗದ ಮಹಿಳೆಯರಿಗಾಗಿ ಚಿಪ್ಸ್‌ಉತ್ಪಾದನಾ ಘಟಕ ಸ್ಥಾಪಿಸಿದೆ. ಈ ಯೋಜನೆ ಮೂಲಕ ಏಳು ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಆದಾಯ ಒದಗಿಸುವ ಕೆಲಸ ಮಾಡಿದೆ ಎಂದು ಅವರು ವಿವರಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ