ಕನ್ನಡಪ್ರಭ ವಾರ್ತೆ ಪಾಂಡವಪುರ
ಮುಂದಿನ ಸಮಾಜಕ್ಕೆ ಸಾಮಾಜಿಕ ಕಳಕಳಿಯುಳ್ಳ ಪ್ರಜೆಗಳನ್ನು ರೂಪಿಸುವ ಕೆಲಸ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಆಗಬೇಕು ಎಂದು ಹಿರಿಯ ರಂಗಕರ್ಮಿ ಚ.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್, ತೇಜಸ್ವಿ ಬಳಗ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮಂಡ್ಯ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪಾಂಡವಪುರ ಬಿಜಿಎಸ್ ಶಾಲೆಯ ಮಕ್ಕಳು ಅಭಿನಯಿಸಿದ್ದ ಮಿನುಗುತಾರೆ ನಾಟಕ ಪ್ರದರ್ಶನ ಹಾಗೂ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ಶಿಕ್ಷಣ ಕೇವಲ ಅಂಕ ಆಧಾರಿತವಾಗಿದೆ. ಸಮಾಜದಲ್ಲಿ ಅನಕ್ಷರಸ್ಥರು ಹೆಚ್ಚಾಗಿದ್ದಾರೆ. ಓದಿದವರು ಇಂದು ಅನಕ್ಷರಂತೆ ವರ್ತಿಸುತ್ತಿದ್ದಾರೆ. ಮಕ್ಕಳಿಗೆ ಕೇವಲ ಪುಸ್ತಕವಲ್ಲದೇ ಬೇರೆ ಬೇರೆ ಅವಕಾಶ ಕಲ್ಪಿಸಬೇಕಿದೆ ಎಂದರು.
ರಂಗಭೂಮಿ, ಸಂಗೀತ, ಸಾಹಿತ್ಯ ಕ್ಷೇತ್ರ ಹೀಗೆ ವಿವಿಧ ಆಯಾಮಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಬದಲಾವಣೆಯಾಗುತ್ತಿದೆ. ಅವರು ಸ್ವತಂತ್ರವಾಗಿ ಅನಿಸಿಕೆ ವ್ಯಕ್ತಪಡಿಸಲು ಸಾಧ್ಯವಾಗಿದೆ. ಜೊತೆಗೆ ಅಭಿವ್ಯಕ್ತಿಗೊಳಿಸುವ ಹಾಗೂ ಸ್ವಾತಂತ್ರ್ಯವಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿದೆ ಎಂದರು.ನಾನು 37 ವರ್ಷಗಳವರೆಗೆ ರಂಗಭೂಮಿಯಲ್ಲಿ ಕೆಲಸ ಮಾಡಿದ್ದು, ಪಾಂಡವಪುರದಲ್ಲಿನ ಗೆಳೆಯರಿಗೆ ಹತ್ತು ಹಲವು ನಾಟಕಗಳನ್ನು ನಿರ್ದೇಶಿಸಿ ಕಲಿಸಿದ್ದೇನೆ. ಅದರಲ್ಲೂ ಕುಂತಿಬೆಟ್ಟದ ಗುಡ್ಡಗಾಡಿನಲ್ಲಿ ನಡೆಸಿದ ಪರಿತ್ಯಕ್ತ ನಾಟಕ ದಾಖಲೆಗೆ ಒಳಗಾಗಿದೆ ಎಂದರು.
ಸಮಾಜ ಸೇವಕ ವಿ.ಎ.ಪಾಟೀಲ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ರಂಗಭೂಮಿ ಉಚ್ಚ್ರಾಯ ಸ್ಥಿತಿಯ ಮೂಲಕ ಜೀವಂತಿಕೆಯಾಗಿದೆ. ಅಲ್ಲಿ ಎರಡು ನಾಟಕ ಕಂಪೆನಿಗಳು ನಿರಂತರವಾಗಿ ನಾಟಕಗಳನ್ನು ನಡೆಸಿಕೊಂಡು ಬರುತ್ತಿವೆ ಎಂದರು.ಬಿಜಿಎಸ್ ಶಾಲೆ ಮಕ್ಕಳು ನಡೆಸಿಕೊಟ್ಟ ವಿಜ್ಞಾನ ನಾಟಕ, ಕಲ್ಪನಾ ಚಾವ್ಲಾ ಜೀವನ ಚರಿತ್ರೆ ಕುರಿತ ಮಿನುಗುತಾರೆ ನಾಟಕವು ಕೆಲವು ಸಣ್ಣ-ಪುಟ್ಟ ತಪ್ಪುಗಳನ್ನು ಹೊರತುಪಡಿಸಿ ಅದ್ಭುತವಾಗಿ ಮೂಡಿಬಂದಿದೆ. ದೊಡ್ಡವರೇ ತಪ್ಪುಗಳನ್ನು ಮಾಡುವಾಗ ಮಕ್ಕಳ ತಪ್ಪು ಅಷ್ಟೇನೂ ದೊಡ್ಡದೆನಿಸುವುದಿಲ್ಲ. ಮುಂದಿನ ದಿನಗಳಲ್ಲಿ ಮಕ್ಕಳು ಮತ್ತಷ್ಟು ಯಶಸ್ಸುನ್ನು ಗಳಿಸಲಿ ಎಂದು ಶುಭ ಹಾರೈಸಿದರು.
ಹಿರಿಯ ಗಾಂಧಿವಾದಿ ಬಿ.ಸುಜಯಕುಮಾರ್ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಹಾಸ್ಯ ಸಾಹಿತಿ ಚಂದ್ರಶೇಖರಯ್ಯ, ಡಾ.ಕೆ.ವೈ.ಶ್ರೀನಿವಾಸ್, ಜೆಡಿಎಸ್ ಮುಖಂಡ ಅಶ್ವಥ್ ಕುಮಾರೇಗೌಡ, ತಾಲೂಕು ಕಸಾಪ ಅಧ್ಯಕ್ಷ ಮೇಣಾಗ್ರ ಪ್ರಕಾಶ್, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ರಂಗಭೂಮಿ ಕಲಾವಿದ ಬಿ.ಎಸ್.ನಾಗಲಿಂಗೇಗೌಡ, ರಂಗ ನಿರ್ದೇಶಕ, ಬಿಜಿಎಸ್ ಶಾಲೆ ಶಿಕ್ಷಕ ಆದಿತ್ಯ ಭಾರದ್ವಾಜ್ ಇತರರಿದ್ದರು.ಕಾರ್ಯಕ್ರಮದಲ್ಲಿ ಪತ್ರಕರ್ತ ಗಣಂಗೂರು ನಂಜೇಗೌಡ, ನಿವೃತ್ತ ಶಿಕ್ಷಕರಾದ ಚಂದ್ರಶೇಖರಯ್ಯ, ಚಪ್ಪರಮನಿ, ಪೋಷಕರಾದ ಮಹೇಶ್, ಎಲ್ ಐಸಿ ಮಂಜು, ಶ್ವೇತಾ, ಜಗದೀಶ್ ಹಾಗೂ ನಾಟಕದಲ್ಲಿ ಅಭಿನಯಿಸಿದ್ದ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳಾದ ಜನನಿ, ಸುವರ್ಣ ಅವರುಗಳು ನಾಟಕ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಇದೇ ವೇಳೆ ನಾಟಕದಲ್ಲಿ ಅಭಿನಯಿಸಿದ್ದ ಮಕ್ಕಳನ್ನು ಅಭಿನಂದಿಸಲಾಯಿತು.