ಶಿಕ್ಷಣ ಸಂಸ್ಥೆಗಳು ಸಂಸ್ಕಾರ ಬೋಧಿಸುವ ಕೇಂದ್ರಗಳಾಗಲಿ: ಅನಿಲ್‌ ಎಚ್‌.ಟಿ.

KannadaprabhaNewsNetwork |  
Published : Nov 02, 2024, 01:28 AM IST
ಚಿತ್ರ : 1ಎಂಡಿಕೆ3 : ಕೊಡಗು ವಿದ್ಯಾಲಯದ ನೂತನ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಕೊಡಗು ವಿದ್ಯಾಲಯ ಶಾಲೆಯ ವೆಬ್ ಸೈಟ್ ಕೊಡಗು ವಿದ್ಯಾಲಯ ಡಾಟ್ ಕಾಮ್‌ಗೆ ಚಾಲನೆ ನೀಡಲಾಯಿತು. ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ, ಪತ್ರಕರ್ತ ಅನಿಲ್ ಎಚ್.ಟಿ. ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶಿಕ್ಷಣ ಸಂಸ್ಥೆಗಳು ಭಾರತೀಯತೆಯೊಂದಿಗೆ ಉತ್ತಮ ಸಂಸ್ಕಾರವನ್ನೂ ಮಕ್ಕಳಿಗೆ ಬೋಧಿಸುವ ಕೇಂದ್ರಗಳಾಗಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿದೆ. ಉತ್ತಮ ಸಂಸ್ಕಾರ ಹೊಂದಿದ ಮಕ್ಕಳೇ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಕೊಡುಗೆ ನೀಡಬಲ್ಲವರಾಗಿದ್ದಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ, ಪತ್ರಕರ್ತ ಅನಿಲ್ ಎಚ್.ಟಿ. ಹೇಳಿದ್ದಾರೆ.ನಗರದ ಕೊಡಗು ವಿದ್ಯಾಲಯ ಶಾಲೆಯ ವೆಬ್ ಸೈಟ್ ಕೊಡಗು ವಿದ್ಯಾಲಯ ಡಾಟ್ ಕಾಮ್‌ಗೆ ಚಾಲನೆ ನೀಡಿ ಮಾತನಾಡಿದರು.

ಕೊಡಗು ವಿದ್ಯಾಲಯ ಶಾಲೆಯನ್ನು 43 ವರ್ಷಗಳ ಹಿಂದೆ ಪ್ರಾರಂಭಿಸುವಲ್ಲಿ ದೇಶದ ಸೇನಾ ಪಡೆಯ ಪ್ರಥಮ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಮಹತ್ವದ ಕೊಡುಗೆ ಇದೆ. ಹೀಗಾಗಿ ಈ ಶಾಲೆಗೆ ಕಾರ್ಯಪ್ಪ ಅವರ ಹಾರೈಕೆ ಎಂದೆಂದಿಗೂ ಇರುತ್ತದೆ. ಭಾರತೀಯ ಹಬ್ಬ, ಉತ್ಸವಗಳನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತೀಯತೆಯನ್ನು ಕಲಿಸುವ ನಿಟ್ಟಿನಲ್ಲಿ ಕೊಡಗು ವಿದ್ಯಾಲಯ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ ಎಂದರು.

ಹಣತೆ ಹೇಗೆ ತನ್ನಲ್ಲಿನ ಬತ್ತಿಯನ್ನು ಸುಟ್ಟುಕೊಂಡು ತ್ಯಾಗಮಯಿ ಸಂಕೇತವಾಗಿ ಬೇರೆಯವರಿಗೆ ಒಳಿತಿನ ಬೆಳಕು ನೀಡುತ್ತದೆಯೋ ಅಂತೆಯೇ ನಾವೆಲ್ಲರೂ ಸಾಮಾಜಿಕ ಹೊಣೆಗಾರಿಕೆಯಿಂದ ನಮ್ಮಲ್ಲಿರುವ ನೆಮ್ಮದಿ, ಸಂತೋಷ ಎಂಬ ಬೆಳಕನ್ನೂ ಅದರ ಕೊರತೆ ಇರುವವರಿಗೆ ನೀಡುವ ಮೂಲಕ ಸಮಾಜವನ್ನು ಅಂಧಕಾರದಿಂದ ಬೆಳಕಿನತ್ತ ಸಾಗಿಸಬೇಕಾಗಿದೆ ಎಂದು ಹೇಳಿದರು.

ಪಟಾಕಿಗಳನ್ನು ಸುಡಬೇಡಿ ಎಂದು ಹೇಳುವುದಕ್ಕಿಂತ ಪರಿಸರ ಸ್ನೇಹಿ ಪಟಾಕಿಗಳನ್ನು ಮುನ್ನೆಚ್ಚರಿಕೆಯಿಂದ ಹೊತ್ತಿಸಿ ಎಂಬುದು ಸೂಕ್ತವಾಗಿದೆ. ದೀಪದಂತೆ ಪಟಾಕಿಗಳು ಕೂಡ ಯಾವುದೇ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೀಪಾವಳಿಯಂದು ಎಚ್ಚರಿಕೆಯಿಂದ ಪರಿಸರ ಸ್ನೇಹಿ ಪಟಾಕಿಗಳನ್ನೇ ಸಿಡಿಸುವ ಮೂಲಕ ಸಡಗರ ತಂದುಕೊಳ್ಳಿ ಎಂದೂ ಅನಿಲ್ ಎಚ್.ಟಿ. ಕೋರಿದರು.

ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರಾದ ಸಿ.ಎಸ್. ಗುರುದತ್, ಸಲಹೆಗಾರ ಕೊಕ್ಕಲೇರ ಕುಮಾರ್ ಸುಬ್ಬಯ್ಯ, ಜಿಲ್ಲಾ ಹೊಟೇಲ್ ರೆಸಾರ್ಟ್‌ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ನೀಮಾ ಸಂಸ್ಥೆಯ ಅಧ್ಯಕ್ಷ ಡಾ. ರಾಜಾರಾಮ್, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ, ವೆಬ್‌ಸೈಟ್ ವಿನ್ಯಾಸಗೊಳಿಸಿದ ಪ್ರತಿಷ್ಟಾ, ಎ.ನೀಲಮ್ಮ ಕಾರ್ಯಪ್ಪ, ಪುಣ್ಯ ಗುರುದತ್ ಇದ್ದರು.

ಶಿಕ್ಷಕಿಯರಾದ ಭಾರತಿ, ನೇತ್ರ, ರೇಖಾ ಕೆ.ಕೆ., ವೀಣಾ ಮೊಣ್ಣಪ್ಪ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ