ಅಮಾವಾಸ್ಯೆ ಪೂಜೆ । ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವ । ವಿವಿಧ ಸೇವೆ । ಗರ್ಭಗುಡಿ ಸುತ್ತ ವಿಶೇಷ ಹೂಗಳ ಅಲಂಕಾರ
ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಮಾವಾಸ್ಯೆ ಪೂಜೆ, ಹಾಲರುವೆ ಉತ್ಸವ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳಾದ ಮಾದೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಎಣ್ಣೆ ಮಜ್ಜನ ಸೇವೆ ಮಹಾಮಂಗಳಾರತಿ ಧಾರ್ಮಿಕವಾಗಿ ನಡೆಯಿತು.ವಿಶೇಷ ಹೂವಿನ ಅಲಂಕಾರ
ಹಾಲರುವೆ ಉತ್ಸವ: ದೀಪಾವಳಿ ಜಾತ್ರೆಯ ವೇಳೆ ಅಮಾವಾಸ್ಯೆ ದಿನದಂದು ಲಕ್ಷಾಂತರ ಭಕ್ತರು ಹಾಲರುವೇ ಉತ್ಸವ ನಡೆಸಲಾಗುತ್ತಿದ್ದು, ಸಾಂಪ್ರದಾಯದಂತೆ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಸ್ಥಳೀಯ ಬೇಡಗಂಪಣರ 10 ರಿಂದ 12 ವರ್ಷದ 101 ಹೆಣ್ಣುಮಕ್ಕಳು ಉಪವಾಸವಿದ್ದು, ಬೆಳ್ಳಂಬೆಳಗ್ಗೆ ಮಲೆ ಮಹದೇಶ್ವರ ಬೆಟ್ಟದಿಂದ 7 ಕಿ.ಮೀ. ದಟ್ಟ ಅರಣ್ಯದ ಕಾಲು ದಾರಿಯಲ್ಲಿ ನಡೆದು ಹಾಲಹಳ್ಳದಲ್ಲಿ ವಾದ್ಯ ಮೇಳದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಮೆರವಣಿಗೆ ಬಂದು ದೇವಾಲಯ ಪ್ರದಕ್ಷಿಣೆ ಹಾಕಿ ಕಳಸಗಳಲ್ಲಿ ಆಲದಿಂದ ತಂದಿರುವ ಜಲವನ್ನು ಮಾದಪ್ಪನಿಗೆ ಅಭಿಷೇಕ ಮಾಡುವ ಮೂಲಕ ಹಾಲರವೆ ಉತ್ಸವ ನಡೆಯಿತು.
ಧಾರ್ಮಿಕ ಉತ್ಸವಗಳು:
ದೀಪಾವಳಿ ಮಹಾ ರಥೋತ್ಸವ: ದೀಪಾವಳಿ ಮಹಾ ರಥೋತ್ಸವ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಅವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಹಾ ರಥೋತ್ಸವ ನಡೆಯಲಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಟಿ ನರಸೀಪುರ ತಾಲೂಕಿನ ಮಾದೇಗೌಡ ಕುಟುಂಬ ವರ್ಗದವರು ದಾಸೋಹ ವ್ಯವಸ್ಥೆಗೆ 70 ಕ್ವಿಂಟಲ್ ಅಕ್ಕಿಯನ್ನು ನೀಡಿದ್ದು, ಕಳೆದ ಮೂರು ದಿನಗಳಿಂದ 45 ಕ್ವಿಂಟಲ್ ಅಕ್ಕಿ ದಾಸೋಹಕ್ಕಾಗಿ ಬಳಸಿಕೊಳ್ಳಲಾಗಿದೆ. ಬೆಳಗಿನ ಉಪಹಾರ ಭಕ್ತರಿಗಾಗಿ ಬೆಲ್ಲದ ಪಾಯಸ, ತರಕಾರಿ ಬಾತ್ ಮತ್ತು ಸಿಹಿ ಪೊಂಗಲ್, ಬಿಸಿಬೇಳೆ ಬಾತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಧ್ಯಾಹ್ನ ಉಪಾಹಾರಕ್ಕೆ ಅನ್ನ ಸಾಂಬಾರ್, ಪಾಯಸ, ರಸಂ, ಮಜ್ಜಿಗೆ ವಿವಿಧ ಬಗೆಯ ತರಕಾರಿಗಳ ಕೂಟ್ ಸೇರಿದಂತೆ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.
ಎಇ ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟ.