ಮಡಿಕೇರಿ: ಪ್ರಸ್ತುತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲ ಕಾರ್ಯಗಳು ಜನಪ್ರತಿನಿಧಿಗಳಿಂದಲೇ ಆಗುತ್ತದೆ ಎನ್ನುವ ಭ್ರಮೆಯಿಂದ ಜನರು ಹೊರ ಬಂದು ಗ್ರಾಹಕರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕರ್ನಾಟಕದ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ಸ್ಥಾಪಕ ಮುಖ್ಯ ಪೋಷಕ ಸೋಮಶೇಖರ್ ವಿ.ಕೆ. ಕರೆ ನೀಡಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೋಮಶೇಖರ್ ವಿ.ಕೆ. ಗ್ರಾಹಕರು ಎಂಬುವುದು ಜಾತಿ, ಮತ, ಧರ್ಮ, ಬಣ್ಣ, ಪಕ್ಷ ಭೇದವಿಲ್ಲದ ಒಂದು ಒಗ್ಗಟ್ಟಿನ ವರ್ಗವಾಗಿದೆ. ಗ್ರಾಹಕರ ಹಕ್ಕುಗಳಿಗಾಗಿ ಗ್ರಾಹಕ ಚಳವಳಿ ನಿರಂತರವಾಗಿರಬೇಕು ಎಂದರು.
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಜನರಿಂದ ಜನರಿಗಾಗಿ’ ಎನ್ನುವ ಚಿಂತನೆ ಭ್ರಮೆಯಾಗಿ ಮಾರ್ಪಟ್ಟಿದೆ. ಒಂದು ಮತ ಹಾಕಿದ ತಕ್ಷಣ ಪ್ರಜಾಪ್ರಭುತ್ವವನ್ನು ಉಳಿಸುವುದು ಶಾಸಕರ, ಸಂಸದರ ಮತ್ತಿತರ ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಜನರು ಸುಮ್ಮನಾಗಬಾರದು ಮತ್ತು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಪ್ರಜೆಗಳಿಂದಲೇ ಪ್ರಜಾಪ್ರಭುತ್ವ ಉಳಿಯಬೇಕಾಗಿದೆ. ಇಂದು ಪ್ರತಿಯೊಬ್ಬ ಪ್ರಜೆಯೂ ಗ್ರಾಹಕನಾಗಿರುವುದರಿಂದ ಗ್ರಾಹಕರ ಹಕ್ಕುಗಳ ಪ್ರತಿಪಾದನೆ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.ಭಾರತ ಸರ್ಕಾರ ಜಾರಿಗೊಳಿಸಿರುವ ಗ್ರಾಹಕ ಸಂರಕ್ಷಣಾ ಕಾಯ್ದೆ–2019 ಗ್ರಾಹಕರಿಗೆ ಹಲವು ಪ್ರಮುಖ ಹಕ್ಕುಗಳನ್ನು ನೀಡಿದೆ. ಸುರಕ್ಷಿತ ವಸ್ತುಗಳನ್ನು ಪಡೆಯುವ ಹಕ್ಕು, ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು, ಆಯ್ಕೆ ಮಾಡುವ ಹಕ್ಕು, ದೂರು ಸಲ್ಲಿಸಿ ಪರಿಹಾರ ಪಡೆಯುವ ಹಕ್ಕು ಸೇರಿದಂತೆ ಅನೇಕ ಹಕ್ಕುಗಳನ್ನು ಈ ಕಾಯ್ದೆ ಒದಗಿಸಿದೆ. ಆದರೆ ಈ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಜಾಗೃತಿ ಅತ್ಯಗತ್ಯವಾಗಿದೆ ಎಂದರು.
ಖರೀದಿಸಿದ ವಸ್ತುವನ್ನು, ಅದರ ಮೇಲೆ ಬರೆದಿರುವ ಬೆಲೆಯನ್ನು, ತೆರಿಗೆಯನ್ನು, ದಿನಾಂಕವನ್ನು, ಗುಣಮಟ್ಟವನ್ನು ಪರಿಶೀಲಿಸಬೇಕು. ಇಂದು ಪ್ಯಾಕೇಜ್, ಟ್ಯಾರಿಫ್ ಯುಗದಲ್ಲಿ ನಾವಿದ್ದೇವೆ, ದೂರ ಸಂಪರ್ಕ ವ್ಯವಸ್ಥೆಯಲ್ಲಿ ಇದು ಹೆಚ್ಚು ಬಳಕೆಯಾಗುತ್ತದೆ. ಇವುಗಳ ಬಗ್ಗೆ ಕೂಡ ಗ್ರಾಹಕರು ಜಾಗೃತರಾಗಬೇಕು ಎಂದ ಅವರು, ಗ್ರಾಹಕರ ಜವಾಬ್ದಾರಿ, ಟೆಲಿಕಾಂ ಮತ್ತು ಬ್ರಾಡ್‌ಕಾಸ್ಟಿಂಗ್ ನಲ್ಲಿ ಶುಲ್ಕ ಹಾಗೂ ಬಿಲ್ಲಿಂಗ್ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.