ಕುಶಾಲನಗರ: ವಾಣಿಜ್ಯ ಮಳಿಗೆಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಆದೇಶ ಉಲ್ಲಂಘಿಸಿ ಸಂಪೂರ್ಣ ಆಂಗ್ಲಮಯ ಫಲಕಗಳನ್ನು ಅಳವಡಿಸಿರುವ ಕ್ರಮ ವಿರೋಧಿಸಿ ಕುಶಾಲನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರಮುಖರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಪುರಸಭೆ ಕಚೇರಿಗೆ ಆಗಮಿಸಿ ಕನ್ನಡ ವಿರೋಧಿ ಧೋರಣೆಯ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್ ಮತ್ತು ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಅವರನ್ನು ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರದೊಂದಿಗೆ ಮುಖ್ಯ ರಸ್ತೆಯ ಅಂಗಡಿ ಮಳಿಗೆಯೊಂದಕ್ಕೆ ಭೇಟಿ ನೀಡಿದ ಪುರಸಭೆ ಅಧಿಕಾರಿಗಳು ಅಂಗಡಿ ಮಳಿಗೆಯಲ್ಲಿ ಅಳವಡಿಸಿದ್ದ ಸಂಪೂರ್ಣ ಆಂಗ್ಲಮಯ ಫಲಕಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.

ನಂತರ ಮಳಿಗೆಯ ಮಾಲೀಕರಿಗೆ ಅಧಿಕಾರಿಗಳು ಸ್ಥಳದಲ್ಲಿಯೇ 5 ಸಾವಿರ ದಂಡ ವಿಧಿಸುವ ಸಂಬಂಧ ಪುರಸಭೆಯಿಂದ ರಶೀದಿ ನೀಡಲಾಯಿತು.

ಆಂಗ್ಲ ಫಲಕಗಳನ್ನು ತೆರೆವುಗೊಳಿಸುವುದಾಗಿ ಅಂಗಡಿಯ ಮಾಲೀಕರು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂತೆಗೆದು ಕೊಂಡರು.

ವೇದಿಕೆಯ ಜಿಲ್ಲಾ ಸಂಚಾಲಕ ಎಂ.ಎಸ್. ಮಣಿಕಂಠ, ತಾಲೂಕು ಅಧ್ಯಕ್ಷರಾದ ಪುಟ್ಟಸ್ವಾಮಿ, ಪ್ರವೀಣ್ ಪೂಜಾರಿ, ಗೌರವಾಧ್ಯಕ್ಷ ನಾಗರಾಜ್ ಪ್ರಮುಖರಾದ ವಿನ್ಸೆಂಟ್ ಲೋಬೋ, ಸರಳ ರಾಮಣ್ಣ, ಸೋಮೇಶ್ ಮತ್ತಿತರರು ಇದ್ದರು.