ಹೊಸಪೇಟೆ: ಸಾರ್ವಜನಿಕ ಸೇವೆಯಲ್ಲಿ ನಿರಂತರ ತೊಡಗಿಸಿಕೊಳ್ಳುವ ಅಧಿಕಾರಿಗಳು, ಸಿಬ್ಬಂದಿ ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಸಾರ್ವಜನಿಕರಿಗೆ ದಕ್ಷತೆಯಿಂದ ಸೇವೆ ನೀಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.
ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ಅಹವಾಲು ಆಲಿಸುವುದು, ಕಡತಗಳ ವಿಲೇವಾರಿ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಂತಹ ದೈನಂದಿನ ಒತ್ತಡದ ಕೆಲಸದ ನಡುವೆ ನೌಕರರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದನ್ನೇ ಮರೆತು ಬಿಡುತ್ತಾರೆ. ಆರೋಗ್ಯ ಕೈಕೊಟ್ಟಾಗ ಆಸ್ಪತ್ರೆಗೆ ಓಡುವುದಕ್ಕಿಂತ, ಮುಂಜಾಗ್ರತೆಯಾಗಿ ವರ್ಷಕ್ಕೊಮ್ಮೆಯಾದರೂ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇಂತಹ ಉಚಿತ ಶಿಬಿರಗಳನ್ನು ಕೇವಲ ಔಪಚಾರಿಕ ಎನ್ನದೆ, ಪ್ರತಿ ಮುಂಚೂಣಿ ಸಿಬ್ಬಂದಿಯೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಕಣ್ಣಿನ ಆಸ್ಪತ್ರೆಯ ನುರಿತ ತಜ್ಞ ವೈದ್ಯರ ತಂಡವು ಅತ್ಯಾಧುನಿಕ ಡಿಜಿಟಲ್ ಉಪಕರಣಗಳ ಮೂಲಕ ಸಿಬ್ಬಂದಿ ಉಚಿತ ಕಣ್ಣಿನ ತಪಾಸಣೆ ಜೊತೆಗೆ ರಕ್ತದೊತ್ತಡ, ಮಧುಮೇಹ, ಸಾಮಾನ್ಯ ದೈಹಿಕ ತಪಾಸಣೆ ನಡೆಸಲಾಯಿತು. ತಪಾಸಣೆ ನಂತರ ಅಗತ್ಯವಿದ್ದ ಸಿಬ್ಬಂದಿಗೆ ಸ್ಥಳದಲ್ಲೇ ಉಚಿತ ಔಷಧಿ ವಿತರಿಸಲಾಯಿತು.ಸ್ವತಃ ಡಿಸಿ, ಸಿಇಒ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಹೊಸಪೇಟೆ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ, ಕಣ್ಣಿನ ತಪಾಸಣಾ ಶಿಬಿರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಆರೋಗ್ಯ ತಪಾಸಣೆಯಲ್ಲಿ ಭಾಗಿಯಾಗಿರುವುದು.