ಕನ್ನಡಪ್ರಭ ವಾರ್ತೆ ಸಾಗರ
ಬೆಂಗಳೂರು ನಗರ ಕಟ್ಟಿದ್ದ ಕೆಂಪೇಗೌಡರು, ಇಂದಿನ ಅಗತ್ಯತೆಯನ್ನು ಐನೂರು ವರ್ಷಗಳ ಹಿಂದೆಯೇ ಅರಿತಿದ್ದ ದಕ್ಷ ಆಡಳಿತಗಾರರಾಗಿದ್ದರು ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಅಭಿಪ್ರಾಯಪಟ್ಟರು.ತಾಲೂಕು ಕಚೇರಿಯಲ್ಲಿ ಗುರುವಾರ ನಡೆದ ಕೆಂಪೇಗೌಡರ ೫೧೫ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು., ಕೆಂಪೇಗೌಡರ ಆಡಳಿತದ ದೂರದೃಷ್ಟಿಯ ಛಾಪು ಕೃತಿಯಲ್ಲಿ ಮೂಡಿದ್ದಲ್ಲದೆ, ಜನರ ಅಗತ್ಯತೆಗಳನ್ನು ಅರಿತು ಅಧಿಕಾರ ನಡೆಸಿದ್ದರು ಎಂದರು.
ನೂರಾರು ಕೆರೆ-ಕಟ್ಟೆಗಳ ನಿರ್ಮಾಣ, ಪಟ್ಟಣದಲ್ಲಿಯೂ ಉದ್ಯಾನವನದ ಅಗತ್ಯತೆ, ನಗರದ ವ್ಯವಸ್ಥಿತ ರಸ್ತೆಗಳು ಅವರನ್ನು ಇಂದಿಗೂ ನಾಡು ಸ್ಮರಿಸುವಂತೆ ಮಾಡಿದೆ. ನಾಡಪ್ರಭು ಕೆಂಪೇಗೌಡರು ಅಂದು ಕಟ್ಟಿದ ಬೆಂಗಳೂರನ್ನು ಇಂದು ವಿಶ್ವವೇ ತಿರುಗಿ ನೋಡುತ್ತಿದೆ ಎಂದು ಹೇಳಿದರು.ಕೆಂಪೇಗೌಡರ ಕುರಿತು ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ ಮಾತನಾಡಿದರು. ಎಡಿಎಲ್ಆರ್ ಗೋಪಿನಾಥ್ ಹಾಜರಿದ್ದರು. ಒಕ್ಕಲಿಗ ಸಮುದಾಯದಿಂದ ಸಮಾರಂಭ ಬಹಿಷ್ಕಾರ:
ತಾಲೂಕು ಆಡಳಿತ ಗುರುವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ಯಾವೊಬ್ಬ ಮುಖಂಡರೂ ಹಾಜರಿರಲಿಲ್ಲ. ಅಲ್ಲದೆ ಪೂರ್ವಭಾವಿ ಸಭೆ ಕರೆಯದೆ, ಹಿಂದಿನ ದಿನ ಸಂಪರ್ಕಿಸಿ ಆಹ್ವಾನ ಪತ್ರಿಕೆಗೆ ಹೆಸರು ಕೇಳುವ ಅಧಿಕಾರಿಗಳ ಬೇಜವಾಬ್ದಾರಿ ಕ್ರಮವನ್ನು ಸಮಾಜದ ಪ್ರಮುಖರು ಖಂಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಗುಂಡಪ್ಪ ಗೌಡರು, ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸುವಂತೆ ಸರ್ಕಾರದ ಆದೇಶವಿದ್ದರೂ ತಾಲೂಕು ಮಟ್ಟದ ಅಧಿಕಾರಿಗಳ ಕಾಟಾಚಾರದ ನಡೆ ತೀವ್ರ ಬೇಸರ ತಂದಿದೆ. ಒಕ್ಕಲಿಗ ಸಮಾಜದವರ ಜೊತೆ ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ. ಜೂ. ೨೭ರ ಬೆಳಗ್ಗೆ ೧೦ಗಂಟೆಗೆ ನಡೆಯುವಕಾರ್ಯಕ್ರಮಕ್ಕೆ ಹಿಂದಿನ ದಿನ ಸಂಜೆ ೬ಗಂಟೆ ಸುಮಾರಿಗೆಕರೆ ಮಾಡಿ ಆಮಂತ್ರಣ ಪತ್ರಿಕೆ ಮುದ್ರಿಸಬೇಕು. ಅಧ್ಯಕ್ಷರ ಹೆಸರುಕೊಡಿ ಎಂದು ಕೇಳಿದ್ದಲ್ಲದೆ, ನಾಳೆ ನಡೆಯುವ ಸಮಾರಂಭಕ್ಕೂಆಗಮಿಸುವಂತೆ ಆಹ್ವಾನಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.