ಹಾವೇರಿ: ಸರ್ಕಾರ ಹಲವಾರು ಕೌಶಲ್ಯಾಧಾರಿತ ಯೋಜನೆಗಳನ್ನು ಸೃಷ್ಟಿಸಿ, ಪ್ರತಿಷ್ಠಿತ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಯುವ ಜನತೆಗೆ ಶಿಕ್ಷಣ, ಉದ್ಯೋಗ ಒದಗಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ, ಸುಧಾಕರ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಗೆ ಭೇಟಿ ನೀಡಿದ ಅವರು, ಸಾರ್ವಜನಿಕರು ಹಾಗೂ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗೌರವ ಸಮ್ಮಾನ ಸ್ವೀಕರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಸರ್ಕಾರ ರಾಜ್ಯದಲ್ಲಿರುವ ಯುವ ಜನತೆಗೆ ಶೈಕ್ಷಣಿಕ ಅರ್ಹತೆಯನ್ವಯ ಉದ್ಯೋಗ ಕಲ್ಪಿಸಿಕೊಡಬೇಕೆಂಬ ಸಂಕಲ್ಪ ಮಾಡಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಸೇರಿದಂತೆ ಅನೇಕ ವೃತ್ತಿಪರ ಕೌಶಲ್ಯಗಳ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುವ ಯುವಜನತೆಗೆ ಗ್ರೇಟೆಸ್ಟ್ ಟೆಕ್ನಾಲಜಿ, ಮೈಕ್ರೋಸಾಫ್ಟನಂತಹ ಹಲವು ಪ್ರತಿಷ್ಠಿತ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಬಹಳಷ್ಟು ಬದಲಾವಣೆ ತರಲು ಮುಂದಾಗಿದ್ದೇವೆ ಎಂದರು.ಶಿಕ್ಷಣ ಕ್ಷೇತ್ರವನ್ನು ಒಮ್ಮೆಲೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹಂತ ಹಂತದಲ್ಲಿ ನಿರೀಕ್ಷೆಗೂ ಮೀರಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಹಂತ ಹಂತವಾಗಿ ಶಿಕ್ಷಕರು, ಬೋಧಕರ ಕೊರತೆಯನ್ನು ಭರ್ತಿ ಮಾಡಿಕೊಳ್ಳಲಾಗುವುದು. ದುಬಾರಿ ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲದ ಬಡವರಿಗೆ ಆರ್ಥಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆರ್ಥಿಕ ಚೈತನ್ಯ ಯೋಜನೆಯಡಿ ಶಿಕ್ಷಣ ಪಡೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ರಾಜ್ಯದಲ್ಲಿ ಎನ್‌ಇಪಿ ಬದಲಾಗಿ ಎಸ್‌ಇಪಿ ಜಾರಿಯಲ್ಲಿದೆ. ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ, ಸಮಸ್ಯೆಗಳನ್ನು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅಪಪ್ರಚಾರಕ್ಕೆ ಆಸ್ಪದ ನೀಡದೇ ಎಲ್ಲರೂ ಒಗ್ಗಟ್ಟಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ ಎಂದರು. ನ್ಯಾಡ್ ಅಪ್ಲೋಡ್: ಕಾಲೇಜು ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ನ್ಯಾಡ್‌ನಲ್ಲಿ (ನ್ಯಾಶನಲ್ ಅಕಾಡೆಮಿ ಡಿಪಾಸಿಟ್) ಅಪ್ಲೋಡ್ ಮಾಡಿದರೆ ಮುಗೀತು. ವಿವಿಧ ಸಂದರ್ಶನ, ಉದ್ಯೋಗಮೇಳ, ವಿದೇಶಿ ಪ್ರಯಾಣ ಹೀಗೆ ಹೊರಗಡೆ ಹೋಗುವಾಗ ಅಂಕಪಟ್ಟಿ ದಾಖಲೆಗಳನ್ನು ಕೈಯಲ್ಲಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಹಾಗಾಗಿ ಅಂಕಪಟ್ಟಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ವಿದ್ಯಾರ್ಥಿಗಳಿಗೆ ಅವಶ್ಯಕತೆ ಇದ್ದಲ್ಲಿ ಕಡಿಮೆ ರೆಟ್‌ನಲ್ಲಿ ಮಾಕ್ಸ್ ಕಾರ್ಡ್ ಕೊಡಲು ತಿಳಿಸಿದ್ದೇವೆ. ಸರ್ವರ್ ಸಮಸ್ಯೆ ದೋಷವಿದೆ. ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದ ರೀತಿಯಲ್ಲಿ ಎಲ್ಲಾ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಸಚಿವರು ಹೇಳಿದರು. ಈ ವೇಳೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣವರ, ಶಾಸಕ ಯಾಸೀರ್‌ಅಹ್ಮದ್ ಖಾನ್ ಪಠಾಣ್, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಂ ಹಿರೇಮಠ, ಆನಂದಸ್ವಾಮಿ ಗಡ್ಡದೇವರಮಠ, ಪ್ರೇಮಾ ಪಾಟೀಲ, ಡಾ. ಆರ್.ಎಂ. ಕುಬೇರಪ್ಪ, ಸಂಜಯಗಾಂಧಿ ಸಂಜೀವಣ್ಣವರ ಸೇರಿದಂತೆ ಇತರರು ಇದ್ದರು.