ಪಕ್ಷಬೇಧ ಮರೆತು ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನ: ಸಚಿವ ಬೋಸರಾಜು

KannadaprabhaNewsNetwork | Published : Nov 5, 2024 12:45 AM

ಸಾರಾಂಶ

ರಾಯಚೂರು ನಗರದ ಐತಿಹಾಸಿಕ ಮಾವಿನ ಕೆರೆ ಸಮಗ್ರ ಅಭಿವೃದ್ಧಿ ಯೋಜನೆಗೆ ಶಂಕು ಸ್ಥಾಪನೆ ಹಾಗೂ ಮೊದಲ ಹಂತದ ಕಾಮಗಾರಿಗೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಎನ್‌.ಎಸ್‌.ಬೋಸರಾಜು ಅವರು ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರುನಗರ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಕ್ಷಬೇಧ ಮರೆತು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದು, ಈ ಕಾರ್ಯಕ್ಕೆ ಎಲ್ಲರು ಸಹಕರಿಸಬೇಕು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.ಸ್ಥಳೀಯ ಐತಿಹಾಸಿಕ ಮಾನವಿನಕೆರೆ ದಡದ ಮೇಲೆ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಐತಿಹಾಸಿಕ ಮಾವಿನಕೆರೆ ಸಮಗ್ರ ಅಭಿವೃದ್ಧಿ ಯೋಜನೆಗೆ ಶಂಕು ಸ್ಥಾಪನೆ ಹಾಗೂ ಮೊದಲ ಹಂತದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರೊಂದಿಗೆ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಮಾವಿನ ಕೆರೆ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡಿದ್ದರೂ ಸಹ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯ ವಾಗಲಿಲ್ಲ, ಇದೀಗ ಆರ್‌ಡಿಎ ಇಲಾಖೆಯಿಂದ ₹ 9 ಕೋಟಿ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ₹ 5 ಕೋಟಿ ಸೇರಿ ಒಟ್ಟು ₹ 14 ಕೋಟಿ ರು. ವೆಚ್ಚದಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಮೊದಲ ಹಂತವಾಗಿ ₹ 5 ಕೋಟಿ ರು.ವೆಚ್ಚದ ಕೆಲಸ ಆರಂಭಿಸುತ್ತಿದ್ದು, ಉಳಿದ ₹9 ಕೋಟಿ ರು.ಕಾಮಗಾರಿಗೆ ಶೀಘ್ರ ಡೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಶುರುಮಾಡಲಾಗುವುದು. ಕೆರೆಯ ಸಮಗ್ರ ಅಭಿವೃದ್ಧಿಗೆ ಸುಮಾರು 50 ಕೋಟಿ ರು.ವೆಚ್ಚದ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಅನುದಾನ ಸರಿದೂಗಿಸಲು ಪ್ರಯತ್ನಿಸ ಲಾಗುವುದು ಎಂದು ಹೇಳಿದರು.ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು, ರಾಜ್ಯದ ಕಾಂಗ್ರೆಸ್‌ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿಯೇ ಕಲಬುರಗಿಯಲ್ಲಿ ಸಚಿವ ಸಂಪುಟದ ಸಭೆ ನಡೆಸಿ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ 11 ಸಾವಿರ ಕೋಟಿ ರು. ಮೀಸಲಿಟ್ಟು ಐತಿಹಾಸಿಕ ತೀರ್ಮಾನ ಕೈಗೊಂಡಿದೆ ಎಂದ ಸಚಿವರು, ರಾಯಚೂರು ಜಿಲ್ಲೆ ಜನರ ಬಹುದಿನಗಳ ಬೇಡಿಕೆಯಾದ ಏಮ್ಸ್‌ ಸ್ಥಾಪನೆ ವಿಚಾರವಾಗಿ ರಾಜ್ಯ ಸರ್ಕಾರ ಬದ್ಧವಾಗಿದ್ದು, ಆ ನಿಟ್ಟಿನಲ್ಲಿಯೇ ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ. ಇದರ ಜೊತೆಗೆ ವಿಮಾನ ನಿಲ್ದಾಣದ ನಿರ್ಮಾಣದ ಕೆಲಸವನ್ನು ಶೀಘ್ರದಲ್ಲಿಯೇ ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಮಾವಿನ ಕೆರೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವುದಾಗಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಮಾವಿನ ಕೆರೆ ಅಭಿವೃದ್ಧಿಗಾಗಿ ಹಿಂದಿನಿಂದಲೂ ಪ್ರಯತ್ನಗಳನ್ನು ಮಾಡುತ್ತಾ ಬರಲಾಗಿದ್ದು, ಇಷ್ಟು ದಿನ ಇದ್ದಂತಹ ಹಲವಾರು ತೊಡಕುಗಳು ನಿವಾರಣೆಗೊಂಡು ಇದೀಗ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಮಾವಿನಕೆರೆ ನೀರಿನ ಶುದ್ಧೀ ಕರಣಗೊಳಿಸುವ ಅಗತ್ಯವಿದ್ದು, ಅದಕ್ಕಾಗಿ ಎಸ್‌ಟಿಪಿ ನಿರ್ಮಿಸಬೇಕಾಗಿದೆ. ಈ ಕಾರ್ಯಕ್ಕೆ ಕೆಕೆಆರ್‌ಡಿಬಿಯಿಂದ ಶಾಸಕರ ಅನುದಾನ ನೀಡಲು ಸಹ ಸಿದ್ಧವಾಗಿದ್ದು, ಆ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.ಸಮಾರಂಭದ ಸಾನಿಧ್ಯವನ್ನು ವಿವಿಧ ಮಠಗಳ ಪೀಠಾಧಿಪತಿಗಳಾದ ಶಾಂತಮಲ್ಲ ಶಿವಾಚಾರ್ಯರು, ಅಭಿನವ ರಾಚೋಟಿ ವೀರಶಿವಾಚಾರ್ಯರು, ಅಡವಿ ಲಿಂಗೇಶ್ವರ ಮಹಾ ರಾಜರು, ಸ್ಮಿತಾ ಅಕ್ಕ, ತಾಳಿಕೋಟೆ ಗುರುರಾಜಾಚಾರ್‌, ಪವನಾಚಾರ್, ಮುಸ್ಲಿಂ ಧರ್ಮಗುರುಗಳಾದ ಅನಿನುದ್ದೀನ್‌ ಖಾದ್ರಿ ಸಹಜಾ, ರಫೀಕ್‌ ಮುಲ್ಲಾ, ಚರ್ಚ್‌ ಫಾದರ್‌ ವರಪ್ರಸಾದ ವಹಿಸಿದ್ದರು.ಶಾಸಕರು, ಎಂಎಲ್ಸಿಗಳು, ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು, ವಿವಿಧ ಪಕ್ಷಗಳ ಮುಖಂಡರು ಕಾರ್ಯಕರ್ತರು,ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರು, ಉದ್ಯಮಿಗಳು,ಸಾರ್ವಜನಿಕರು ಇದ್ದರು.

Share this article