ರಾಷ್ಟ್ರೀಯ ಹೆದ್ದಾರಿ 169 ಎ ಇದರ ಮಲ್ಪೆ - ಅದಿಉಡುಪಿ ಸಹಿತ ಹಿರಿಯಡ್ಕ, ಪರ್ಕಳ ಹಾಗೂ ಪೆರ್ಡೂರು ಭಾಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಷ್ಟ್ರೀಯ ಹೆದ್ದಾರಿ 169 ಎ ಇದರ ಮಲ್ಪೆ - ಅದಿಉಡುಪಿ ಸಹಿತ ಹಿರಿಯಡ್ಕ, ಪರ್ಕಳ ಹಾಗೂ ಪೆರ್ಡೂರು ಭಾಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಮಲ್ಪೆ - ಆದಿಉಡುಪಿ ರಾಹೆ ಕಾಮಗಾರಿ ಭೂಸ್ವಾಧೀನ ವಿಳಂಬದಿಂದ ಕುಂಠಿತವಾಗಿದ್ದು, ಈಗಾಗಲೇ ಭೂಮಾಲೀಕರಿಗೆ ಪರಿಹಾರ ಪಾವತಿಯ ನೋಟಿಸ್ ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯ 214 ಕಡತಗಳ ಪೈಕಿ 19 ಸರ್ಕಾರಿ ಜಮೀನು ಹೊರತುಪಡಿಸಿ 195 ಖಾಸಗಿ ಜಮೀನು ಮಾಲಿಕರ ಪೈಕಿ 51 ನೋಟೀಸ್ ಸ್ವೀಕರಿಸಿದ್ದು, 48 ಮಂದಿ ಪರಿಹಾರ ಮೊತ್ತ ಪಡೆಯಲು ತಮ್ಮ ದಾಖಲಾತಿಗಳನ್ನು ಒದಗಿಸಿದ್ದಾರೆ. ಬಾಕಿ ಇರುವ 144 ಜಮೀನು ಮಾಲಕರನ್ನು ಸಂಪರ್ಕಿಸಿ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಬುಧವಾರದಿಂದಲೇ (ನ.6) ಮಲ್ಪೆ ಆದಿ ಉಡುಪಿ ಕಾಮಗಾರಿ ಮರು ಆರಂಭ ಮಾಡುವಂತೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.ಪರ್ಕಳ ಹೆದ್ದಾರಿ ಕಾಮಗಾರಿ ನ್ಯಾಯಾಲಯ ತಡೆಯಾಜ್ಞೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವು ಸರ್ಕಾರದ ಪರವಾಗಿ ಬಂದಿದ್ದು, ಭೂಮಾಲೀಕರಿಗೆ ಕೂಡಲೇ ಪರಿಹಾರದ ಹಣ ನೀಡಿ, ಕಾಮಗಾರಿ ಪ್ರಾರಂಭಿಸಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ರಾಷ್ಟೀಯ ಹೆದ್ದಾರಿ 169 ಎ ಅಧಿಕಾರಿಗಳಾದ ಮಂಜುನಾಥ ಗೌಡ, ನವೀನ್ ರಾಜ್, ಮಂಜುನಾಥ ನಾಯಕ್, ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.