ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ಇಂಗಲಗುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ಗ್ರಾಮದಿಂದ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದೆ ಗ್ರಾಮದ ರಾಮಮಂದಿರದಲ್ಲಿ ನಡೆಸಲಾಗುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಅಧ್ಯಕ್ಷರು ಮತ್ತು ಎಲ್ಲಾ ನಿರ್ದೇಶಕರು, ಉತ್ಪಾದಕರು ಮನವಿ ಮಾಡಿದ್ದಾರೆ ಎಂದರು.ನೀವು ನಿವೇಶನ ಖರೀದಿಸಿ ಸಂಘದ ಕಟ್ಟಡ ಕಟ್ಟಲು ಮುಂದಾದರೆ ಆಡಳಿತ ಮಂಡಳಿ ಚುನಾವಣೆ ಮುಗಿದ ಬಳಿಕ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮೊದಲ ಆದ್ಯತೆಯಲ್ಲಿ ಕೆಎಂಎಫ್ ಹಾಗೂ ಒಕ್ಕೂಟದಿಂದ ದೊರೆಯುವ ಅನುದಾನ ಒದಗಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಗ್ರಾಮದಲ್ಲಿ ಜನಿಸಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಮೂರ್ತಿ ಇ.ಎಸ್.ವೆಂಕಟರಾಮಯ್ಯ ಅವರ ನೆನಪಿಗಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮೊದಲ ಬಾರಿ ಶಾಸಕರಾದಾಗ ಪ್ರೌಢಶಾಲೆ ಮಂಜೂರು ಮಾಡಿಸಿದರು. ಸಚಿವರಾಗಿದಾಗ ವಿಶೇಷ ಕಾಳಜಿವಹಿಸಿ ಜಮೀನಿನ ಸಮಸ್ಯೆ ಬಗೆಹರಿಸಿ ಸರ್ಕಾರದ ಅನುದಾನ, ದಾನಿಗಳು ಹಣ ಸಂಗ್ರಹಿಸಿ ಜತೆಗೆ ವೈಯುಕ್ತಿಕವಾಗಿ ಹಣ ಹಾಕಿ ಹೈಕೋರ್ಟ್ ಮಾದರಿಯಲ್ಲಿ ಶಾಲೆ ನಿರ್ಮಾಣ ಮಾಡಿಸುತ್ತಿದ್ದಾರೆ ಎಂದರು.ನಮ್ಮ ಚಿಕ್ಕಪ್ಪನ ಸಿ.ಎಸ್.ಪುಟ್ಟರಾಜು ಈ ಗ್ರಾಮದ ಮೇಲೆ ವಿಶೇಷವಾದ ಪ್ರೀತಿಕಾಳಜಿ ಹೊಂದಿದ್ದಾರೆ. ನಾನು ಸಹ ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯ, ಅನುದಾನವನ್ನು ಗ್ರಾಮದ ಡೈರಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಡೈರಿ ಅಧ್ಯಕ್ಷ ಇ.ಜೆ.ಮಂಜು ಮಾತನಾಡಿ, ಡೈರಿಗೆ ಸ್ವಂತ ಕಟ್ಟಡಕ್ಕಾಗಿ ಹಿಂದಿನ ನಿರ್ದೇಶಕರಿಗೆ ಅನುದಾನ ಕೊಡಿಸುವಂತೆ ಮನವಿ ಮಾಡಿದ್ದೆವು. ಆದರೆ, ಅವರು ಅನುದಾನ ಮಂಜೂರು ಮಾಡಿಸಲಿಲ್ಲ. ಇದೀಗ ನೀವು ನಿರ್ದೇಶಕರಾಗಿ ಆಯ್ಕೆಯಾಗಿದ್ದೀರಿ. ದಯಮಾಡಿ ಸಂಘಕ್ಕೆ ಸ್ವಂತಕಟ್ಟಡಕ್ಕಾಗಿ ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ಮನವಿ ಮಾಡಿದರು.ಇದೇ ವೇಳೆ ಡೈರಿ ವತಿಯಿಂದ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು. ಉಪಾಧ್ಯಕ್ಷ ಮಂಜು, ನಿರ್ದೇಶಕರಾದ ಕೆ.ನಿರಂಜನ್, ಜವರೇಗೌಡ, ಜೆ.ನಾಗೇಶ್, ಎಸ್.ಚಂದ್ರು, ಹೇಮಲತಾ, ಟಿ.ಯಶೋಧ, ಎಸ್.ಮಮತ, ಕಾರ್‍ಯದರ್ಶಿ ರಾಜೇಶ್ವರಿ ಎನ್.ಪುಟ್ಟರಾಮೇಗೌಡ, ವಿಸ್ತರ್ಣಾಧಿಕಾರಿ ಜಗದೀಶ್, ಡೈರಿ ಮಾಜಿ ನಿರ್ದೇಶಕ ಕೆ.ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಶಿವಣ್ಣ, ತಾಪಂ ಮಾಜಿ ಸದಸ್ಯ ಅಲ್ಪಳ್ಳಿಗೋವಿಂದಯ್ಯ, ಆನಂದ ಸೇರಿದಂತೆ ಹಲವರು ಇದ್ದರು.