ಭಾರೀ ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ಚರಂಡಿ ನೀರು; ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಹಿಡಿಶಾಪ

KannadaprabhaNewsNetwork | Published : May 15, 2025 1:35 AM
Follow Us

ಸಾರಾಂಶ

ಮಳೆ ಬಂದ ಪ್ರತಿ ಬಾರಿಯೂ ಪಟ್ಟಣದ ಡಾ,ಎಚ್.ಎನ್.ವೃತ್ತದಲ್ಲಿ ನ್ಯಾಷನಲ್ ಕಾಲೇಜು ರಸ್ತೆ, ಗೂಳೂರು ರಸ್ತೆ ಸೇರಿ ಪಟ್ಟಣದ ನಾನಾ ರಸ್ತೆಗಳ ಹಾಗೂ ಚರಂಡಿಗಳ ಮೂಲಕ ಹರಿದುಬರುವ ಮಳೆ ಮತ್ತು ಚರಂಡಿ ಕೊಳಚೆ ನೀರು ನಿಂತು ಕೆರೆಯಂತಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಕಳೆದ ಹಲವಾರು ವರ್ಷಗಳಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗೆಪಲ್ಲಿ

ಬುಧವಾರ ಸಂಜೆ ಗುಡುಗು- ಸಿಡಿಲು, ಬಿರುಗಾಳಿ ಸಮೇತ ಸುರಿದ ಭಾರೀ ಮಳೆಯಿಂದಾಗಿ ಚರಂಡಿಯಲ್ಲಿ ಸರಾಗವಾಗಿ ಹರಿಯಬೇಕಾಗಿದ್ದ ಮಳೆ ನೀರು ಮತ್ತು ತ್ಯಾಜ್ಯ ರಸ್ತೆ ಸೇರಿದಂತೆ ತಗ್ಗುಪ್ರದೇಶಗಳ ಮನೆಗಳಿಗೆ ನುಗ್ಗಿದೆ. ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಮಳೆ ನೀರಿನ ಜೊತೆಗೆ ಚರಂಡಿ ತ್ಯಾಜ್ಯ ನೀರು ಸಂಗ್ರಹವಾದ ಪರಿಣಾಮ ಸಂಪೂರ್ಣ ವೃತ್ತ ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ಬಂದ ಪ್ರತಿ ಬಾರಿಯೂ ಪಟ್ಟಣದ ಡಾ,ಎಚ್.ಎನ್.ವೃತ್ತದಲ್ಲಿ ನ್ಯಾಷನಲ್ ಕಾಲೇಜು ರಸ್ತೆ, ಗೂಳೂರು ರಸ್ತೆ ಸೇರಿ ಪಟ್ಟಣದ ನಾನಾ ರಸ್ತೆಗಳ ಹಾಗೂ ಚರಂಡಿಗಳ ಮೂಲಕ ಹರಿದುಬರುವ ಮಳೆ ಮತ್ತು ಚರಂಡಿ ಕೊಳಚೆ ನೀರು ನಿಂತು ಕೆರೆಯಂತಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಕಳೆದ ಹಲವಾರು ವರ್ಷಗಳಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಡಾ.ಎಚ್.ಎನ್.ವೃತ್ತದಲ್ಲಿ ಮಳೆ ಮತ್ತು ಚರಂಡಿ ಕೊಳಚೆ ನೀರು ಸಂಗ್ರಹವಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದರೂ ಸಹ ನಮಗೂ ಈ ಸಮಸ್ಯೆಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಲೋಕೋಪಯೋಗಿ, ಪುರಸಭೆ ಸೇರಿದಂತೆ ಇಲ್ಲಿನ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕಿದರಲ್ಲದೆ, ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ ಮತ್ತು ಹೂಳು ತೆರವುಗೊಳಿಸುವಲ್ಲಿ ಇಲ್ಲಿನ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮುಖ್ಯ ರಸ್ತೆ ಹಾಗೂ ಗೂಳೂರು ರಸ್ತೆಯನ್ನು ಕೋಟ್ಯಂತರ ರು.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಿರುವ ಹಿನ್ನೆಲೆಯಲ್ಲಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ತಕ್ಷಣ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ ಹಾಗೂ ಹೂಳು ತೆರವುಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಸಾರ್ವಜನಿಕರು ಅನುಭವಿಸುತ್ತಿರುವ ಕಿರಿಕಿರಿ ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.