ಕಾರವಾರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಗೋವಾಕ್ಕಿಂತಲೂ ಅತ್ಯುತ್ತಮವಾದ ಪ್ರವಾಸ ತಾಣಗಳಿದ್ದು, ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು, ಕರಾವಳಿ ಭಾಗದಲ್ಲಿರುವ ಐಲ್ಯಾಂಡ್‌ಗಳಲ್ಲಿ ವಿವಿಧ ಪ್ರವಾಸಿ ಚಟುವಟಿಕೆಗಳನ್ನು ಕೈಗೊಳ್ಳುವ ಕುರಿತಂತೆ ಯೋಜನೆ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಕೆ. ಸೈಲ್ ತಿಳಿಸಿದರು.
ಶುಕ್ರವಾರ ಕಾರವಾರದ ಹೋಟೆಲ್‌ವೊಂದರ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ನಡೆದ ಚಿತ್ರಕಲಾ ಶಿಬಿರ ಮತ್ತು ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಮಾಜಾಳಿಯಿಂದ ಭಟ್ಕಳದವರೆಗೆ 130 ಕಿಮೀ ಅಧಿಕ ಕರಾವಳಿ ಪ್ರದೇಶದಲ್ಲಿ ಹಲವು ವೈವಿಧ್ಯಮಯ ಬೀಚ್‌ಗಳು ಮತ್ತು ಹಲವು ಐಲ್ಯಾಂಡ್‌ಗಳು ಇವೆ. ಸಮುದ್ರ ಮಧ್ಯದಲ್ಲಿರುವ ಈ ದ್ವೀಪಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸಿದಲ್ಲಿ ಜಿಲ್ಲೆಯು ಪ್ರವಾಸಿಗರಿಗೆ ನೆಚ್ಚಿನ ಆಕರ್ಷಣೀಯ ತಾಣವಾಗಲಿದೆ ಎಂದರು.
ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ, ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಹಾಗೂ ಮೀನುಗಾರಿಕಾ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ಯೋಜನೆಗಳನ್ನು ರೂಪಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಪಂ ವತಿಯಿಂದ ನರೇಗಾ ಸೇರದಿಂತೆ ವಿವಿಧ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರವಾಸೋದ್ಯಮ ಭಾಗಿದಾರರೊಂದಿಗೆ ಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ಸುಂದರ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕಾರ್ಯಕ್ರಮಗಳು ನಡೆಯಬೇಕು. ಸಾರ್ವಜನಿಕರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ವೈವಿಧ್ಯಮಯ ಸಂಸ್ಕೃತಿಗಳ ಪರಿಚಯ ಸಾಧ್ಯವಾಗಲಿದೆ ಎಂದರು.ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಯಂತ್, ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಜಲಪಾತಗಳು, ಪಶ್ವಿಮಘಟ್ಟದ ಜೀವ ವೈವಿಧ್ಯ ತಾಣಗಳು ಸೇರಿದಂತೆ 100ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಪ್ರವಾಸಿಗರಿಗೆ ಅತ್ಯುತ್ತಮವಾದ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ್ನು ರಾಜ್ಯಾದ್ಯಂತ ಪರಿಚಯಿಸುವ ಉದ್ದೇಶದಿಂದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದು, ರಾಜ್ಯದ ವಿವಿಧ ಭಾಗಗಳಿಂದ 70ಕ್ಕೂ ಅಧಿಕ ಚಿತ್ರ ಕಲಾವಿದರು ಭಾಗವಹಿಸಿದ್ದು, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರವಾಸೋದ್ಯಮ ದಿನಾಚರಣೆಯನ್ನು 3 ದಿನಗಳ ಕಾಲ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕಲಾವಿದರಾದ ರಾಘವೇಂದ್ರ ಕೆ., ಮನೋಜ್ ಚಕ್ರವರ್ತಿ, ರವಿ ಗುನಗಾ ಇದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಚಿತ್ರಕಲಾ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.