ಕೊಪ್ಪಳ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಮಟ್ಟದಲ್ಲಿ ನಡೆದಿದ್ದ ಪ್ರತಿಭಟನೆಯ ಬಳಿಕ ಶುಕ್ರವಾರ ಜಿಲ್ಲಾ ಕೇಂದ್ರ ಕೊಪ್ಪಳ ನಗರದ ಜಿಲ್ಲಾಡಳಿತ ಭವನದ ಎದುರು ಗ್ರಾಮಾಡಳಿತ ನೌಕರರು ಧರಣಿ ನಡೆಸಿದರು.
ಗ್ರಾಮಾಡಳಿತ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ಶ್ರೇಣಿ ನೀಡಿ ಆದೇಶ ಮಾಡುವುದು, ಸಂಯೋಜನೆ, ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ ಹುಕುಂ, ಹಕ್ಕುಪತ್ರ, ನಮೂನೆ ೧-೫ ವೆಬ್ ಅಪ್ಲಿಕೇಶನ್, ಪೌತಿ ಆಂದೋಲನ ಆ್ಯಪ್, ಸಂರಕ್ಷಣೆ, ಸಿ-ವಿಜಿಲ್ ಆ್ಯಪ್, ನವೋದಯ, ಗರುಡ ಆ್ಯಪ್, ಭೂಮಿ, ಎಲೆಕ್ಟ್-೧ ವೋಟರ್ ಹೆಲ್ಪ್‌ಲೈನ್, ಬೆಳೆ ಸಮೀಕ್ಷೆ, ಬೆಳೆ ಸಮೀಕ್ಷೆಯ ಅನುಮೋದನೆಯ ವೆಬ್ ಆ್ಯಪ್ ಸೇರಿದಂತೆ ವಿವಿಧ ಆ್ಯಪ್‌ಗಳಲ್ಲಿ ಕಾರ್ಯ ನಿರ್ವಹಿಸುವ ಗ್ರಾಮಾಡಳಿತ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ಶ್ರೇಣಿ ನೀಡುವಂತೆ ಒತ್ತಾಯಿಸಲಾಯಿತು. ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ, ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಆಸೀಫ್ ಅಲಿ, ಪದಾಧಿಕಾರಿಗಳಾದ ಬಸವರಾಜ ಲಂಬಾಣಿ, ಬಸನಗೌಡ ರಾಮಶೆಟ್ಟರ್, ಮಹೇಶಗೌಡ ಹಾಗೂ ಎಲ್ಲ ತಾಲೂಕು ಅಧ್ಯಕ್ಷರು, ಗ್ರಾಮ ಸ್ವಯಂ ಸೇವಕರು ಧರಣಿಗೆ ಬೆಂಬಲಿಸಿದರು. ಇನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್, ವಿಕಲಚೇತನರ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮ್ಯಾಗಳಮನಿ, ಕರವೇ ಜನಸೇನಾ ಬಸವರಡ್ಡಿ, ರೈತ ಸಂಘಟನೆಗಳ ಮುಖಂಡರು ಧರಣಿಗೆ ಬೆಂಬಲ ನೀಡಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.