ಕನ್ನಡಪ್ರಭ ವಾರ್ತೆ ವಿಜಯಪುರ
ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಬೃಹನ್ಮಠದಲ್ಲಿ ಶ್ರೀ ಗುರುಪಾದೇಶ್ವರ ಶಿವಯೋಗಿಗಳ 184ನೇ ಮಹಾಗಣಾರಾಧನೆ, ಡಾ.ಮಹಾದೇವ ಶಿವಾಚಾರ್ಯ ಶ್ರೀಗಳ ವಜ್ರಮಹೋತ್ಸವ ಹಾಗೂ ಉತ್ತರಾಧಿಕಾರಿ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ನಿಮಿತ್ತ ತಿರಂಗಾ ಬುತ್ತಿ ಯಾತ್ರೆಯನ್ನು ಮಠದ ಮಹಾದ್ವಾರದಲ್ಲಿ ಸ್ವಾಗತಿಸಿ, ನಂತರ ನಡೆದ ಪ್ರವಚನ ಸಮಾರಂಭದಲ್ಲಿ ಮಾತನಾಡಿದ ಅವರು, 12ನೇ ಶತಮಾನವೇ ಬಬಲೇಶ್ವರ ಮಠದ ಕಾರ್ಯಕ್ರಮ ಮರುಕಳಿಸಿದಂತೆ ಗೋಚರಿಸುತ್ತಿದೆ. ತಾಯಂದಿರು ಬುತ್ತಿ ಉತ್ಸವವನ್ನು ಭಕ್ತಿ, ಶ್ರದ್ಧೆಯಿಂದ ಮಾಡಿದ್ದಾರೆ. ಈ ಸೇವೆಯಲ್ಲಿ ತಮ್ಮದೂ ಒಂದು ಅಗುಳಿನ ಪಾತ್ರವಿದೆ, ಇಲ್ಲಿಗೆ ನೀರು ಹರಿಸಿದ ತೃಪ್ತಿ ನನ್ನದು ಎಂದರು. ಸಮೃದ್ಧ ಬೆಳೆ ಬೆಳೆದು ಎಲ್ಲರೂ ಸುಖಿಯಾಗುತ್ತಿದ್ದಾರೆ. ಅಂಥ ಮನೆಗಳಿಂದ ಬಂದ ರೊಟ್ಟಿಗೆ ನೀರು ದೊರೆತ ನೆಮ್ಮದಿ ಇದೆ. ಸಿದ್ದೇಶ್ವರ ಶ್ರೀಗಳ ಆಶಯದಂತೆ ಬರದ ನಾಡಿನ ಹಣೆಪಟ್ಟಿ ತೆಗೆಯಲು ಶ್ರಮಿಸಿದ್ದೇನೆ. ವಿಜಯಪುರ ಭೀಕರ ಬರಗಾಲ ಪ್ರದೇಶವಾಗಿತ್ತು. ಜಿಲ್ಲೆಯಲ್ಲಿ ಭೂಮಿ ಕಳೆದುಕೊಂಡ ಅರ್ಧ ಭಾಗವೂ ನೀರಾವರಿ ಆಗಿರಲಿಲ್ಲ. ಬಬಲೇಶ್ವರ, ತಿಕೋಟಾಗಳಿಗೆ ಶಕ್ತಿ ಮೀರಿ ನೀರು ನೀಡಿದ್ದೇವೆ. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ನೆನೆಸಬೇಕು ಎಂದ ಅವರು, ವಚನಪಿತಾಮಹ ಡಾ.ಫ.ಗು.ಹಳಕಟ್ಟಿ, ಬಂಥನಾಳ ಶಿವಯೋಗಿ, ಶಾಂತವೀರ ಶ್ರೀಗಳು ಈ ಭಾಗದ ರತ್ನಗಳು. ಈಗಿನ ಮಹಾದೇವ ಶ್ರೀಗಳದ್ದು ಮಗುವಿನ ಮನಸ್ಸು. ಮಠಮಾನ್ಯಗಳಿಗೆ ತಮ್ಮ ಸೇವೆ, ಸಹಕಾರ ನಿರಂತರ ಇರಲಿದೆ ಎಂದು ಭರವಸೆ ನೀಡಿದರು. ಮಣಕವಾಡದ ಮೃತ್ಯುಂಜಯ ಶ್ರೀಗಳು ಪ್ರವಚನ ನೀಡಿ, ಮಣಕವಾಡಿಯಲ್ಲಿ ಶಾಲೆ ಆರಂಭಿಸಲು ಸಚಿವ ಎಂ.ಬಿ.ಪಾಟೀಲ ಅವರಿಂದ ಗುದ್ದಲಿ ಪೂಜೆ ಮಾಡಿಸಿದ್ದೆವು. ಅದು ಈಗ ಬೃಹತ್ತಾಗಿ ಬೆಳೆದಿದೆ ಎಂದರು. ಅಭಿನವ ಸಿದ್ಧಾರೂಢ ಶ್ರೀಗಳು ಮಾತನಾಡಿ, ಸಚಿವ ಎಂ.ಬಿ.ಪಾಟೀಲರು ಆಕಾಶದಿಂದ ಬಿದ್ದ ನೀರನ್ನು ರೈತರಿಗೆ ನೀಡಿದ ಸಾಧಕರು. ಬೆಳೆವ ಸನ್ಯಾಸಿಗಳ ಹಿಂದೆಯೂ ಇವರಿದ್ದಾರೆ. ಶರಣ ಪರಂಪರೆ ಮುಂದುವರಿಸಿದ್ದಾರೆ ಎಂದರು.ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಮಾತನಾಡಿದರು. ಡಾ.ಮಹಾದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನಗೂಳಿಯ ಅಭಿನವಸಂಗನಬಸವ ಶಿವಾಚಾರ್ಯರು, ಮಲ್ಲಿಕಾರ್ಜುನ ದೇವರು, ಮೈಸೂರಿನ ನಿರಂಜನ ದೇವರು, ವಿಜುಗೌಡ ಪಾಟೀಲ ಉಪಸ್ಥಿತರಿದ್ದರು.