ಬಾಳಂಬೀಡ ಯೋಜನೆ ಮೂಲಕ ಕೆರೆ ತುಂಬಿಸುವ ಪ್ರಯತ್ನ-ಶಾಸಕ ಮಾನೆ

KannadaprabhaNewsNetwork | Published : Jul 2, 2024 1:31 AM

ಸಾರಾಂಶ

ಮಳೆ ಆಶಾದಾಯಕವಾಗಿ ಬೀಳುತ್ತಿಲ್ಲ. ತಾಲೂಕಿನ ಜೀವನದಿ ವರದಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚುತ್ತಿಲ್ಲ. ಇಂಥ ಸಂದಿಗ್ಧ ಸಂದರ್ಭದ ಮಧ್ಯೆಯೂ ನದಿಯಲ್ಲಿ ಲಭ್ಯ ಜಲಮೂಲ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಹತ್ವಾಕಾಂಕ್ಷೆಯ ಬಾಳಂಬೀಡ, ತಿಳವಳ್ಳಿ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳ ಮೂಲಕ ಕೆರೆ-ಕಟ್ಟೆ ತುಂಬಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ.

ಹಾನಗಲ್ಲ: ಮಳೆ ಆಶಾದಾಯಕವಾಗಿ ಬೀಳುತ್ತಿಲ್ಲ. ತಾಲೂಕಿನ ಜೀವನದಿ ವರದಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚುತ್ತಿಲ್ಲ. ಇಂಥ ಸಂದಿಗ್ಧ ಸಂದರ್ಭದ ಮಧ್ಯೆಯೂ ನದಿಯಲ್ಲಿ ಲಭ್ಯ ಜಲಮೂಲ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಹತ್ವಾಕಾಂಕ್ಷೆಯ ಬಾಳಂಬೀಡ, ತಿಳವಳ್ಳಿ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳ ಮೂಲಕ ಕೆರೆ-ಕಟ್ಟೆ ತುಂಬಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ೧೮೨ಕೆರೆಗಳನ್ನು ತುಂಬಿಸುವ ಬಾಳಂಬೀಡ ಏತ ನೀರಾವರಿ ಯೋಜನೆಯಡಿ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ೩೪೮೦ ಎಚ್.ಪಿ.ಸಾಮರ್ಥ್ಯದ ಒಟ್ಟು ೫ ಮೋಟರ್‌ಗಳ ಮೂಲಕ ನೀರು ಹರಿಸಲಾಗುತ್ತಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಿದರೆ ಇನ್ನಷ್ಟು ಅನುಕೂಲವಾಗಲಿದೆ. ಇನ್ನು ತಾಲೂಕಿನ ೭೮ ಕೆರೆಗಳನ್ನು ತುಂಬಿಸುವ ಹಿರೇಕಾಂಶಿ ಏತ ನೀರಾವರಿ ಯೋಜನೆಯಡಿಯೂ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ೧೦೭೫ ಎಚ್.ಪಿ. ಸಾಮರ್ಥ್ಯದ ಒಟ್ಟು ೩ ಮೋಟರ್‌ಗಳ ಮೂಲಕ ನೀರು ಹರಿಸಲಾಗುತ್ತಿದ್ದು, ಈಗಾಗಲೇ ಹಿರೇಕಾಂಶಿ ಮತ್ತು ಮೂಡೂರು ಭಾಗದ ಕೆರೆಗಳ ಒಡಲು ತುಂಬುತ್ತಿದೆ. ಬಾಳಂಬೀಡ ಮತ್ತು ಹಿರೇಕಾಂಶಿ ಈ ಎರಡೂ ಏತ ನೀರಾವರಿ ಯೋಜನೆಗಳಡಿ ನೀರು ತುಂಬಿಸುವ ಕಾರ್ಯಕ್ಕೆ ಹೆಚ್ಚುವರಿಯಾಗಿ ತಲಾ ಒಂದು ಮೋಟರ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ತಾಂತ್ರಿಕ ದೋಷ ಕಂಡು ಬಂದರೆ ಕೂಡಲೇ ಮೋಟರ್ ಬದಲಿಸಿ ನೀರು ಹರಿಸಲಾಗುವುದು ಎಂದು ವಿವರಿಸಿದ್ದಾರೆ.

ತಿಳವಳ್ಳಿ ಏತ ನೀರಾವರಿ ಯೋಜನೆಯಡಿಯೂ ತಿಳವಳ್ಳಿಯ ದೊಡ್ಡ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ಶೇ. ೧೫ರಷ್ಟು ಪ್ರಮಾಣದಲ್ಲಿ ನೀರು ಕೆರೆಗೆ ಹರಿದಿದೆ. ಬಸಾಪುರ ಏತ ನೀರಾವರಿ ಯೋಜನೆಯ ಮೊದಲ ಮತ್ತು ಎರಡನೆ ಹಂತದಡಿಯೂ ಕೃಷಿ ಭೂಮಿಗೆ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ನೀರು ಹರಿಯಲಿದೆ. ಬಳಿಕ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಉತ್ತಮ ಮಳೆ ಸುರಿದು ವರದಾ ಮತ್ತು ಧರ್ಮಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾದರೆ ಅನುಕೂಲವಾಗಲಿದ್ದು, ಕೆರೆ-ಕಟ್ಟೆಗಳಿಗೆ ನೀರು ಹರಿದು ಅಂತರ್ಜಲ ಮರುಪೂರಣ ಸಾಧ್ಯವಾಗಲಿದೆ. ಅನಾವೃಷ್ಟಿಯ ಸಂಕಷ್ಟಕ್ಕೂ ತೆರೆ ಬೀಳಲಿದೆ ಎಂದಿರುವ ಶ್ರೀನಿವಾಸ ಮಾನೆ, ನದಿಗಳಲ್ಲಿ ಲಭ್ಯ ಜಲಮೂಲ ಸದ್ಭಳಕೆ ಮಾಡಿಕೊಂಡು ಕೆರೆ-ಕಟ್ಟೆಗಳ ಒಡಲಿಗೆ ನೀರು ಹರಿಸುವಲ್ಲಿ ಕಾಳಜಿ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈ ಕುರಿತು ನಿತ್ಯವೂ ವರದಿ, ಮಾಹಿತಿ ಪಡೆದು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.

Share this article