ಮಾನ್ವಿ : ರಾಯಚೂರು ಜಿಲ್ಲೆಯ ಬಹುದಿನಗಳ ಕನಸು ಮತ್ತು ಅಗತ್ಯ ಬೇಡಿಕೆಯಾಗಿರುವ ಭಾರತೀಯ ವೈದ್ಯಕೀಯ ಸಂಸ್ಥೆ (ಏಮ್ಸ್) ಮಂಜೂರಾತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಪಟ್ಟಣದಲ್ಲಿ ಕೆಎಸ್ಎನ್ ಸೇವಾ ಸಮಿತಿ ಭಾನುವಾರ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ಮದುವೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸದಾ ಒಂದು ಮಾತು ಹೇಳುತ್ತಾರೆ.ಉತ್ತರ ಕರ್ನಾಟಕದಲ್ಲಿ ಬಡತನವಿರಬಹುದು ಆದರೆ ಹೃದಯ ಶ್ರೀಮಂತಿಕೆಗೇನೂ ಕೊರತೆಯಿಲ್ಲ ಎಂಬುದು ಇಂದು ಸಾಬೀತಾಗಿದೆ. ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆ,ವಿಶ್ವಾಸವನ್ನು ಮರೆಯದೇ,ಸರ್ವಾಂಗೀಣ ಅಭಿವೃಧ್ಧಿಗೆ ಶ್ರಮಿಸಲಾಗುವದು ಎಂದು ಹೇಳಿದರು.
ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ ಭಾಗದ ನೀರಾವರಿ ಯೋಜನೆಗಳಿಗೆ,ಕೈಗಾರಿಕಾ ಕ್ಷೇತ್ರದ ಅಭಿವೃಧ್ಧಿ,ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸೇರಿದಂತೆ ತಮ್ಮ ನಿರೀಕ್ಷೆಯಂತೆ ಸೇವೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ತಂದೆ ಬಿ.ಎಸ್.ಯಡಿಯೂರಪ್ಪನವರು ತಮ್ಮೆಲ್ಲರ ಆರ್ಶೀವಾದದಿಂದ 4 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ರೈತರ ಪ್ರತ್ಯೇಕ ಬಜೆಟ್ ಮಂಡಿಸಿದ್ದಾರೆ. ಬಡವರ, ಮಹಿಳೆಯರ, ರೈತರ, ಯುವಕರನ್ನು ಒಳಗೊಂಡು ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಅವರ ನಡೆ ನಮ್ಮ ಬಾಳಿಗೆ ದಾರಿದೀಪವಾಗಿದೆ ಎಂದರು.
ಇಂದು ನೂತನ ಜೀವನಕ್ಕೆ ಕಾಲಿಡುತ್ತಿರುವ ದಂಪತಿ ಅದೃಷ್ಟವಂತರು. ಎಲ್ಲಾ ಹರ-ಗುರು ಚರಮೂರ್ತಿಗಳ ಆರ್ಶೀವಾದ ದೊರಕಿದೆ. ಸ್ವಾಭಿಮಾನದಿಂದ ಬಾಳಿ ಎಂದು ಬಿ.ವೈ.ವಿಜಯೇಂದ್ರ ಹಾರೈಸಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದ ಬಿ.ವಿ.ನಾಯಕ ಅಧ್ಯಕ್ಷತೆ ವಹಿಸಿದ್ದರು. ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ, ಕನಕಗುರುಪೀಠದ ಸಿದ್ದರಾಮಾನಂದ ಪೂರಿ ಸ್ವಾಮೀಜಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಕುಷ್ಠಗಿ, ಶಾಸಕರಾದ ಭೈರತಿ ಬಸವರಾಜ, ಗಾಲಿ ಜನಾರ್ಧನರೆಡ್ಡಿ, ಶೈಲೇಂದ್ರ ಬೀದರ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಮಾಜಿ ಶಾಸಕ ತಿಪ್ಪರಾಜು ನಾಯಕ, ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಕೆಎಸ್ಎನ್ ಸೇವಾ ಸಮಿತಿ ಅಧ್ಯಕ್ಷ ತಿಮ್ಮಾರೆಡ್ಡಿ ಮಾತನಾಡಿದರು.
ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಗಂಗಾಧರ ನಾಯಕ, ರಾಜ್ಯ ಕುರುಬ ಸಮಾಜ ಅಧ್ಯಕ್ಷ ಎಂ.ಈರಣ್ಣ,ಮಾಜಿ ಶಾಸಕ ಬಸವರಾಜ ಧಡೆಸೂಗೂರ, ಬಿಜೆಪಿ ಮುಖಂಡ ಶರಣು ತಳ್ಳಿಕೇರಿ ಉಪಸ್ಥಿತರಿದ್ದರು.
ಅದ್ದೂರಿ ಸ್ವಾಗತ:
ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಲು ಆಗಮಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಹೆಲಿಪ್ಯಾಡ್‌ನಿಂದ ತೆರೆದ ಜೀಪಿನಲ್ಲಿ ಬಿ.ವೈ.ವಿಜಯೇಂದ್ರರಿಗೆ ಮೆರವಣಿಗೆ ಮೂಲಕ ವೇದಿಕೆ ತರಲಾಯಿತು.ಜೆಸಿಬಿ,ಕ್ರೇನ್ ಮೂಲಕ ಹೂಗಳನ್ನು ಹಾಕಿ ಭವ್ಯ ಸ್ವಾಗತ ಕೋರಲಾಯಿತು.ಮನ್ವಿ ಪಟ್ಟಣ ಮತ್ತು ರಾಯಚೂರು-ಸಿಂದನೂರು ರಸ್ತೆ ಮಾರ್ಗಧಲ್ಲಿ ಭಾರಿ ಪ್ರಮಾಣದಲ್ಲಿ ಬ್ಯಾನರ್,ಕಟೌಟ್ಗಳು ರಾರಾಜಿಸಿದವು.