ಗದಗ: ಪ್ರಾಮಾಣಿಕತೆಯಿಂದ ನಿಧಿಯನ್ನು ಸರ್ಕಾರಕ್ಕೆ ಮರಳಿ ನೀಡಿರುವ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ನಿಧಿಯ ಬಂಗಾರದ ಸಮಾನಾಂತರ ಸಹಾಯಧನ ನೀಡುವ ಕುರಿತಂತೆ ಗ್ರಾಮಸ್ಥರ ಒತ್ತಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಭರವಸೆ ನೀಡಿದರು.ಮಂಗಳವಾರ ಗ್ರಾಮದ ಪ್ರಜ್ವಲ್ ರಿತ್ತಿ ಅವರ ಕುಟುಂಬವನ್ನು ಭೇಟಿ ಮಾಡಿ ನಂತರ ಮಾತನಾಡಿ, ರಿತ್ತಿ ಕುಟುಂಬವು ಕಡುಬಡವರಾಗಿದ್ದಾರೆ. ಸಾಕಷ್ಟು ಸಂಪತ್ತು ಸಿಕ್ಕಿದ್ದರೂ ಸಹಿತ ಯಾವುದೇ ಫಲಾಪೇಕ್ಷೆಯಿಲ್ಲದೆ ಸರ್ಕಾರಕ್ಕೆ ಮರಳಿ ನೀಡಿರುವ ಕಾರ್ಯ ಶ್ಲಾಘನೀಯ. ಪ್ರಜ್ವಲ್‌ನಿಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿವಿಧ ವಿಭಾಗಗಳ ಪ್ರಶಸ್ತಿಗೆ ಪರಿಗಣಿಸುವುದರ ಮೂಲಕ ಸಹಾಯಧನದ ನೆರವಿನ ಹಸ್ತವನ್ನು ಹೆಚ್ಚಿಸುವಂಥ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ರಿತ್ತಿ ಕುಟುಂಬಕ್ಕೆ ಪರ್ಯಾಯ ವಸತಿ ಸೌಕರ್ಯ, ಶಿಕ್ಷಣ ಸೌಲಭ್ಯ ಸೇರಿದಂತೆ ಅನೇಕ ಸಹಾಯ ದೊರಕುವಂತೆ ಮಾಡುವ ಕಾರ್ಯವನ್ನು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸರ್ಕಾರ ಮಾಡಲಿದೆ ಎಂದರು.