ಕಾರ್ಮಿಕರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ನೂತನ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಹೇಳಿದ್ದಾರೆ.
ಮಂಗಳೂರು: ರಾಜ್ಯದಲ್ಲಿ 2 ಕೋಟಿಗೂ ಅಧಿಕ ಅಸಂಘಟಿತ ಮತ್ತು 53 ಲಕ್ಷ ಸಂಘಟಿತ ಕಾರ್ಮಿಕರಿದ್ದಾರೆ. ಅವರಿಗೆ ಕಾಲಕಾಲಕ್ಕೆ ಕನಿಷ್ಠ ವೇತನ ಹೆಚ್ಚಿಸುವುದು ಸೇರಿದಂತೆ ಕಾರ್ಮಿಕರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ನೂತನ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಹೇಳಿದ್ದಾರೆ.
ಮಂಡಳಿಯ ಅಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ ಮಂಡಳಿಗೆ ಐಎಎಸ್ ಅಧಿಕಾರಿಗಳು ಅಧ್ಯಕ್ಷರಾಗಿದ್ದರು. ಇದೇ ಮೊದಲ ಬಾರಿಗೆ ಕಾರ್ಮಿಕರ ಪರವಾಗಿ ಕೆಲಸ ಮಾಡಿದ ನನಗೆ ಅಧ್ಯಕ್ಷ ಸ್ಥಾನದ ಅವಕಾಶವನ್ನು ಸರ್ಕಾರ ನೀಡಿದೆ. ಭವಿಷ್ಯದ ದಿನಗಳಲ್ಲಿ ಎಲ್ಲ ಕಾರ್ಮಿಕ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ರಾಜ್ಯದ ಕಾರ್ಮಿಕರಿಗೆ ಪ್ರಸ್ತುತ 14ರಿಂದ 19 ಸಾವಿರ ರು. ಕನಿಷ್ಠ ವೇತನ ನೀಡಲಾಗುತ್ತಿದೆ. ನಾನು ಅಧಿಕಾರ ಸ್ವೀಕಾರ ಮಾಡುವುದಕ್ಕೂ ಮೊದಲು ಸೆಪ್ಟೆಂಬರ್‌ನಲ್ಲಿ ಮಂಡಳಿಯು ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಪುರಸ್ಕರಿಸುವ ಅಥವಾ ತಿರಸ್ಕಾರ ಮಾಡುವ ಅಧಿಕಾರ ಸರ್ಕಾರಕ್ಕಿದೆ. ವರದಿ ತಿರಸ್ಕಾರಗೊಂಡರೆ ಮತ್ತೊಮ್ಮೆ ಕಾರ್ಮಿಕರ ಪರವಾಗಿ ಕನಿಷ್ಠ ವೇತನ ಪರಿಷ್ಕರಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಟಿ.ಎಂ. ಶಹೀದ್ ಹೇಳಿದರು. ಕನಿಷ್ಠ ವೇತನ ನೀಡದಿದ್ದರೆ ಕ್ರಮ:ರಾಜ್ಯದಲ್ಲಿ 81 ವಿವಿಧ ಬಗೆಯ ಕಾರ್ಮಿಕರಿದ್ದಾರೆ. ಯಾವುದೇ ಸಂಸ್ಥೆಗಳು ತನ್ನ ಕಾರ್ಮಿಕರಿಗೆ ಈಗಾಗಲೇ ನಿಗದಿಪಡಿಸಿರುವ ಕನಿಷ್ಠ ವೇತನ ನೀಡದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮಂಡಳಿಯು ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಜತೆಗೆ ಕಾರ್ಮಿಕ ಸಂಘಟನೆಗಳ ಜತೆ ನಿಕಟ ಸಂಪರ್ಕ ಇಟ್ಟುಕೊಂಡು ಅವರ ಹಿತಾಸಕ್ತಿ ಕಾಪಾಡಲು ಮಂಡಳಿ ಬದ್ಧವಾಗಿದೆ ಎಂದರು.
ಮಂಡಳಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ 9 ಮಂದಿ ಪ್ರತಿನಿಧಿಗಳು, ಸಿನೆಮಾ ಕ್ಷೇತ್ರ, ಉದ್ಯಮ ಪ್ರತಿನಿಧಿಗಳು ಸೇರಿದಂತೆ ಒಟ್ಟು 27 ಮಂದಿ ಸದಸ್ಯರು ಇರುತ್ತಾರೆ ಎಂದು ತಿಳಿಸಿದರು.ಅ.10ಕ್ಕೆ ಸ್ಮಾರ್ಟ್ ಕಾರ್ಡ್ ವಿತರಣೆ:
ಕಾರ್ಮಿಕರಿಗೆ ವಿವಿಧ ಸವಲತ್ತು ಒದಗಿಸುವ ಉದ್ದೇಶದಿಂದ ಕೊಡಮಾಡುವ ಸ್ಮಾರ್ಟ್ ಕಾರ್ಡ್‌ಗಳ ವಿತರಣೆ ಅ.10ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಸಚಿವ ಲಾಡ್ ಕೂಡ ಭಾಗವಹಿಸಲಿದ್ದಾರೆ ಎಂದು ಟಿ.ಎಂ. ಶಹೀದ್ ಹೇಳಿದರು.ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಸ್ತಫಾ, ಮುಖಂಡರಾದ ಜಯಶೀಲ ಅಡ್ಯಂತಾಯ, ನಿತ್ಯಾನಂದ ಶೆಟ್ಟಿ, ಕಿರಣ್ ಕುಮಾರ್ ಬುಡ್ಲೆಗುತ್ತು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.