ಮಂಗಳೂರು ವಿ.ವಿ. ಶೈಕ್ಷಣಿಕ ವೇಳಾಪಟ್ಟಿ ಒಂದು ತಿಂಗಳು ಮುಂದಕ್ಕೆ: ಕುಲಪತಿ ಪ್ರೊ.ಪಿ.ಎಲ್‌.ಧರ್ಮ

KannadaprabhaNewsNetwork |  
Published : Oct 11, 2025, 12:03 AM IST
ಪ್ರೊ.ಪಿ. ಎಲ್‌.ಧರ್ಮ ಸಭೆ ನಡೆಸುತ್ತಿರುವುದು  | Kannada Prabha

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯದ ವೇಳಾಪಟ್ಟಿ ಒಂದು ತಿಂಗಳ ಕಾಲ ಮುಂದೂಡಿಕೆಯಾಗಿದೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಂಗಳೂರು ವಿವಿಯಲ್ಲಿ ಗುರುವಾರ ನಡೆದ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಿದ್ದಾರೆ.

ಮಂಗಳೂರು: ಅತಿಥಿ ಉಪನ್ಯಾಸಕರ ನೇಮಕದಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ಸಾಲಿನ ಪದವಿ, ಸ್ನಾತಕೋತ್ತರ ಪದವಿಗಳ ವೇಳಾಪಟ್ಟಿಯನ್ನು ಸರ್ಕಾರ ಪರಿಷ್ಕರಿಸಿದೆ. ಹೀಗಾಗಿ ಮಂಗಳೂರು ವಿಶ್ವವಿದ್ಯಾಲಯದ ವೇಳಾಪಟ್ಟಿಯೂ ಒಂದು ತಿಂಗಳ ಕಾಲ ಮುಂದೂಡಿಕೆಯಾಗಿದೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದ್ದಾರೆ.

ಮಂಗಳೂರು ವಿವಿಯಲ್ಲಿ ಗುರುವಾರ ನಡೆದ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗದ ಕಾರಣ ಬೋಧನಾ ಚಟುವಟಿಕೆ ಅಸ್ತವ್ಯಸ್ತಗೊಂಡಿರುವ ಕಾರಣ ಕಾಲೇಜು ಶಿಕ್ಷಣ ಇಲಾಖೆ ಈ ಪರಿಷ್ಕರಣೆ ಮಾಡಿದೆ ಎಂದರು.

ಅದರಂತೆ 1, 3, 5ನೇ ಸೆಮಿಸ್ಟರ್ ತರಗತಿಗಳು ಹಿಂದೆ ಹೇಳಿದಂತೆ ನವೆಂಬರ್ 22ಕ್ಕೆ ಮುಗಿಯುವ ಬದಲು ಡಿಸೆಂಬರ್ 20ಕ್ಕೆ ಮುಗಿಯಲಿವೆ. 2, 4, 6ನೇ ಸೆಮಿಸ್ಟರ್ ತರಗತಿಗಳು 12.01.2026 ರ ಬದಲು 10.02.2026ರಿಂದ ಕಾರ್ಯಾರಂಭಿಸಲಿವೆ. 2,4,6ನೇ ಸೆಮಿಸ್ಟರ್ ತರಗತಿಗಳು 08.05.2026ಕ್ಕೆ ಪೂರ್ಣಗೊಳ್ಳುವ ಬದಲಿಗೆ 05.06.2026ಕ್ಕೆ ಪೂರ್ಣಗೊಳ್ಳಲಿವೆ. ಮುಂದಿನ ಶೈಕ್ಷಣಿಕ ವರ್ಷ 2026ರ ಆಗಸ್ಟ್‌ನಲ್ಲಿ ಆರಂಭಗೊಳ್ಳಲಿದೆ ಎಂದು ಕುಲಪತಿ ತಿಳಿಸಿದರು.

ಮಂಗಳೂರು ವಿವಿಯಲ್ಲಿ ಕೋವಿಡ್ ನಂತರ ವೇಳಾಪಟ್ಟಿಯಲ್ಲಿ ಸುಮಾರು 90 ದಿನಗಳ ವಿಳಂಬ ಉಂಟಾಗಿದ್ದುದನ್ನು 45 ದಿನಕ್ಕೆ ಇಳಿಸಿದ್ದೆವು. ಹೊಸ ಶೈಕ್ಷಣಿಕ ವೇಳಾಪಟ್ಟಿಯನ್ನು ಎಲ್ಲ ಕಾಲೇಜುಗಳಿಗೆ ನೀಡಲಾಗಿತ್ತು. ಆದರೆ ಈಗ ಸರ್ಕಾರದ ಆದೇಶವಾದ್ದರಿಂದ ಏನೂ ಮಾಡುವಂತಿಲ್ಲ. ನಮ್ಮಲ್ಲಿ ಅತಿಥಿ ಉಪನ್ಯಾಸಕರ ನೇಮಕ ಮೊದಲೇ ಆಗಿತ್ತು, ಆದರೆ ಸರ್ಕಾರದ ಆದೇಶದಂತೆ ಅತಿಥಿ ಉಪನ್ಯಾಸಕರಿಗೆ ಒಂದು ತಿಂಗಳ ವೇತನ ರಹಿತ ರಜೆ ಇರುತ್ತದೆ. ವಿದ್ಯಾರ್ಥಿಗಳು ರಜೆಯಲ್ಲಿ ಅಧ್ಯಯನ ಮಾಡಬೇಕಿರುತ್ತದೆ. ಎಲ್ಲ ಅಧೀನ ಖಾಸಗಿ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ಅಧ್ಯಯನ ರಜೆ ನೀಡಬಹುದು, ಉತ್ತಮವಾಗಿ ಪರೀಕ್ಷೆಗೆ ಸಿದ್ಧಗೊಳಿಸಲು ಅವಕಾಶ ಇದೆ ಎಂದರು.

ವಿವಿಯು ಮೌಲ್ಯಮಾಪನವನ್ನು ತ್ವರಿತಗೊಳಿಸುವ ಇರಾದೆ ಹೊಂದಿದ್ದು, ರಿಮೋಟ್ ಆಧಾರದಲ್ಲಿ ಇದನ್ನು ಕೈಗೊಳ್ಳುವ ಬಗ್ಗೆ ಪ್ರಸ್ತಾವನೆಯನ್ನು ಯುಯುಸಿಎಂಎಸ್‌ಗೆ ಕಳುಹಿಸಲಾಗಿದೆ. ಅಲ್ಲಿ ಅನುಮೋದನೆ ಲಭಿಸಿದರೆ ಮೌಲ್ಯಮಾಪನ ಚುರುಕಾಗಬಹುದು ಎಂದರು.

ಪಿಎಚ್‌ಡಿ ನಿಯಮಾವಳಿ ಬದಲಾವಣೆ: ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಪಿಎಚ್‌ಡಿ ಪದವಿ ಕಾರ್ಯಕ್ರಮಗಳಿಗೂ ಕನಿಷ್ಠ ಮಾನದಂಡ ಮತ್ತು ಕಾರ್ಯವಿಧಾನವನ್ನು ಪರಿಷ್ಕರಿಸಿ ನಿಗದಿಪಡಿಸುವಂತೆ ಯುಜಿಸಿ ನಿರ್ದೇಶನ ನೀಡಿದೆ. ಅದರಂತೆ ಮಂಗಳೂರು ವಿವಿಯಲ್ಲೂ ಪಿಎಚ್‌ಡಿ ಕಾರ್ಯಕ್ರಮವನ್ನು ನಿಯಂತ್ರಿಸುವ ವಿನಿಯಮದ ಬಗ್ಗೆ ಚರ್ಚೆ ನಡೆಯಿತು.

ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ: ಮಂಗಳೂರು ವಿವಿ ಸಂಯೋಜಿತ ಮಂಗಳೂರಿನ ಕೆನರಾ ಕಾಲೇಜಿಗೆ ಸ್ವಾಯತ್ತತೆ ನೀಡುವ ಪ್ರಸ್ತಾಪಕ್ಕೆ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿತು. 2025-26ನೇ ಸಾಲಿನಿಂದ 2035-36ನೇ ಸಾಲಿನ ವರೆಗೆ ಸ್ವಾಯತ್ತತೆ ನೀಡುವುದಕ್ಕೆ ಪೂರಕವಾಗಿ ಸ್ಥಾಯಿಸಮಿತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು.ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಡಾ. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಇದ್ದರು.

ಡೇಟಾ ಅನಲಿಟಿಕ್ಸ್, ಎಐ ಕೋರ್ಸ್‌ಗಳಿಗೆ ಅನುಮೋದನೆವಿವಿ ವ್ಯಾಪ್ತಿಯ ಸ್ವಾಯತ್ತ ಕಾಲೇಜುಗಳು 2025-26ನೇ ಸಾಲಿನಲ್ಲಿ ಹೊಸ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಅನುಮತಿ ಕೋರಿರುವುದಕ್ಕೆ ಅನುಮೋದನೆ ನೀಡಲಾಯಿತು. ವಿವೇಕಾನಂದ ಕಾಲೇಜು ಪುತ್ತೂರು ಬಿಕಾಂ(ಬಿಸಿನೆಸ್ ಡಾಟಾ ಅನಲಿಟಿಕ್ಸ್), ಬಿಬಿಎ ಲಾಜಿಸ್ಟಿಕ್ಸ್, ಬಿಸಿಎ ಸೈಬರ್ ಸೆಕ್ಯೂರಿಟಿ, ಎಂಎಸ್ಸಿ ಕೈಗಾರಿಕಾ ರಸಾಯನ ಶಾಸ್ತ್ರ, ಸಂತ ಫಿಲೋಮಿನ ಪುತ್ತೂರು ಬಿಎಸ್ಸಿ ಡಾಟಾ ಸೈನ್ಸ್, ಬಿಬಿಎ ಡಾಟಾ ಅನಲಿಟಿಕ್ಸ್, ಬಿಕಾಂ, ಸಂತ ಆ್ಯಗ್ನೆಸ್ ಮಂಗಳೂರು ಬಿಸಿಎ ಎಐ ಆ್ಯಂಡ್ ಮಷಿನ್ ಲರ್ನಿಂಗ್ ಬಿಎಸ್ಸಿ ಡೇಟಾ ಸೈನ್ಸ್, ಎಂಎಸ್ಸಿ ಕೌನ್ಸೆಲಿಂಗ್ ಕೋರ್ಸ್‌ಗಳಿಗೆ ಅನುಮೋದಿಸಲಾಯಿತು. ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಸ್ಟ್ರಾಟೆಜಿಕ್ ಫೈನಾನ್ಸ್, ಇಂಟರ್ ನ್ಯಾಷನಲ್ ಫೈನಾನ್ಸ್, ಲೀಗಲ್ ಕಾಂಪ್ಲಯನ್ಸ್, ಅಕೌಂಟಿಂಗ್ ಆ್ಯಂಡ್ ಆಡಿಟ್, ಇಂಟರ್ನ್ಯಾಷನಲ್ ಅಕೌಂಟಿಂಗ್, ಬ್ಯಾಂಕಿಂಗ್ ಆ್ಯಂಡ್ ಇನ್ಸುರೆನ್ಸ್, ಬಿಸಿನೆಸ್ ಡಾಟಾ ಅನಲಿಟಿಕ್ಸ್ ಗಳಲ್ಲಿ ಬಿಕಾಂ, ಎಐ ಆ್ಯಂಡ್ ಮಷಿನ್ ಲರ್ನಿಂಗ್ ಬಿಸಿಎ, ಗಣಿತ-ಸಂಖ್ಯಾಶಾಸ್ತ್ರ-ಗಣಕವಿಜ್ಞಾನ ಬಿಎಸ್ಸಿ ಕೋರ್ಸ್ ಗಳಿಗೆ ಅನುಮೋದನೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌