ಉಳ್ಳಾಲ: ಮಂಜನಾಡಿ ಉರುಮಣೆಕೋಡಿ ದುರಂತಕ್ಕೆ ಸಂಬಂಧಿಸಿ ಸಂತ್ರಸ್ತೆ ಅಶ್ವಿನಿಗೆ ನೋಟೀಸ್ ನೀಡಿ ಅ.೮ ರಂದು ಹಾಜರಾಗದ ಅಧಿಕಾರಿಗಳು ಮಾಧ್ಯಮಗಳಲ್ಲಿ ಸುದ್ಧಿಯಾಗುತ್ತಿದ್ದಂತೆ ಅ.೯ ರಂದು ಅಸೌಖ್ಯದಿಂದ ಇದ್ದ ತನಿಖಾಧಿಕಾರಿಯಾಗಿ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಜಯಪ್ರಕಾಶ್ ನಿಯೋಗ ಭೇಟಿ ನೀಡಿ ಕಾಂಕ್ರೀಟಿಕರಣಗೊಂಡಿರುವ ರಸ್ತೆ , ಮಣ್ಣು ಮತ್ತು ಕುಸಿತಗೊಂಡಿರುವ ಮನೆಯ ಸುತ್ತಲೂ ಅಳತೆ ನಡೆಸಲಾಯಿತು.
ಈ ಕುರಿತು ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗದೇ, ಮಂಜನಾಡಿ ಗ್ರಾಮ ಪಂಚಾಯಿತಿಯಿಂದ ಮಾನವ ನಿರ್ಮಿತ ರಸ್ತೆ, ಹಳೇಯ ಮನೆ ಅನ್ನುವ ಸುಳ್ಳು ವರದಿ ನೀಡಿ ಸರಕಾರದ ಹಾದಿ ತಪ್ಪಿಸಲು ಯತ್ನಿಸಿದ್ದರು ಎಂದು ಅಶ್ವಿನಿ ಮನೆಮಂದಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಮಾನವ ಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಪೊಲೀಸ್ ಇಲಾಖೆಗೆ ನಿಗದಿತ ದಿನಾಂಕದೊಳಕ್ಕೆ ವರದಿ ನೀಡುವಂತೆಯೂ , ಸ್ಥಳಪರಿಶೀಲನೆ ನಡೆಸಲು ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಅವರನ್ನು ನಿಯೋಜಿಸಿತ್ತು. ನೀರಾವರಿ ಇಲಾಖೆಯಿಂದ ಅ.7 ರಂದು ಅಶ್ವಿನಿ ತನಿಖೆ ಸಂದರ್ಭ ಘಟನಾ ಸ್ಥಳದಲ್ಲಿ ಹಾಜರಾಗುವಂತೆ ವಾಟ್ಸಾಪ್ ಗೆ ನೋಟೀಸು ನೀಡಿದ್ದ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನೋಟೀಸು ನೀಡಿದ ಅ.8 ರಂದು ಹಾಜರಾಗದ ಅಧಿಕಾರಿಯ ನಡೆಯನ್ನು ಮತ್ತೆ ಘಟನಾ ಸ್ಥಳದಲ್ಲಿ ಸೇರಿದ್ದ ಮುಖಂಡರು ಹಾಗೂ ಕುಟುಂಬಿಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಎರಡು ಕಾಲುಗಳನ್ನು ಕಳೆದುಕೊಂಡಿರುವ ಅಶ್ವಿನಿಯನ್ನು ಕರೆತರಿಸಿ ಅಧಿಕಾರಿಗಳು ಗೈರಾಗಿ ಅಮಾನವೀಯತೆ ಮೆರೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಲಾಗಿತ್ತು. ಅಲ್ಲದೆ ತನಿಖಾಧಿಕಾರಿ ಅಸೌಖ್ಯದಿಂದ ಇರುವುದಾಗಿ ಮೊಬೈಲ್ ಮೂಲಕ ಸಂಭಾಷಣೆ ನಡೆಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರಿಂದ ಅ.9 ರಂದು ಮಾಧ್ಯಮಗಳ ವರದಿ ಬೆನ್ನಲ್ಲೇ ಅಸೌಖ್ಯದಿಂದ ಇದ್ದ ಅಧಿಕಾರಿ ಸ್ಥಳ ಪರಿಶೀಲನೆಗೆ ಆಗಮಿಸಿ ಅಳತೆ ಮಾಡಿದ್ದಾರೆ.ಅಳತೆ ಸಂದರ್ಭ ಸಹೋದರ ಪವನ್, ಪತಿ ಸೀತಾರಾಮ, ಸಂಬಂಧಿ ಸುಮಲತಾ ಕೊಣಾಜೆ, ಬಿಜೆಪಿ ಮುಖಂಡರಾದ ಜಗದೀಶ್ ಆಳ್ವ ಕುವೆತ್ತಬೈಲ್, ಮುರಳೀಧರ್ ಕೊಣಾಜೆ, ಪುಷ್ಪರಾಜ್ ಹರೇಕಳ ಮತ್ತಿತರರಿದ್ದರು.ಶೀಘ್ರವೇ ತೆರವು: ಕುಸಿದುಬಿದ್ದ ಮನೆಯ ಅವಶೇಷಗಳನ್ನು ಕೂಡಲೇ ತೆರವುಗೊಳಿಸುವಂತೆ ಮನೆಮಂದಿ ಉಳ್ಳಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್ ಅವರಲ್ಲಿ ಒತ್ತಾಯಿಸಿದ್ದರು.