ದೇಶ ಭಾಷೆ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Jul 11, 2025, 01:47 AM IST
ಶ್ರೀಗಳು ಆರ್ಶೀವಚನ ನೀಡುತ್ತಿರುವುದು | Kannada Prabha

ಸಾರಾಂಶ

ದೇಶದ ಬಗ್ಗೆ ಅಭಿಮಾನ, ಭಾಷೆಯ ಬಗ್ಗೆ ಪ್ರೀತಿ, ಉಡುಗೆ-ತೊಡುಗೆ ಬಗ್ಗೆ ಪ್ರತಿಯೊಬ್ಬರಿಗೆ ಆದರದ ಭಾವ ಬೇಕು.

ಗೋಕರ್ಣ: ದೇಶದ ಬಗ್ಗೆ ಅಭಿಮಾನ, ಭಾಷೆಯ ಬಗ್ಗೆ ಪ್ರೀತಿ, ಉಡುಗೆ-ತೊಡುಗೆ ಬಗ್ಗೆ ಪ್ರತಿಯೊಬ್ಬರಿಗೆ ಆದರದ ಭಾವ ಬೇಕು. ಸಂಸ್ಕೃತಿಯ ಸಂಕೇತವಾದ ಭಾಷೆಯನ್ನು ಶ್ರೀಮಂತಗೊಳಿಸುವ ಪ್ರಯತ್ನ ಈ ಚಾತುರ್ಮಾಸ್ಯದಲ್ಲಿ ನಡೆಯುತ್ತಿದೆ ಎಂದು ರಾಘವೇಶ್ವರ ಭಾರತೀ ಶ್ರೀ ನುಡಿದರು. ಸ್ವಭಾಷಾ ಚಾತುರ್ಮಾಸ ವ್ರತ ಆರಂಭದ ಧರ್ಮಸಭೆಯನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು. ನಮ್ಮ ಪೂರ್ವಜರು ಬಳಸುತ್ತಿದ್ದ ಶಬ್ದಗಳನ್ನು ಹೊರ ತೆಗೆಯಬೇಕು. ಮಾತೃಭಾಷೆಯನ್ನು ಮರೆತವರು ಮಾತಾ ಪಿತೃಗಳನ್ನು ಕಡೆಗಣಿಸುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು. ಚಾತುರ್ಮಾಸ್ಯದಲ್ಲಿ ಪುಣ್ಯ ಸಂಪಾದನೆ ಮಾಡಿ ಜೀವನದಲ್ಲಿ ಒಳ್ಳೆಯ ಮಾರ್ಗ ಕಂಡುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮಾತೃಭಾಷೆಯನ್ನೇ ಮರೆತ ಸ್ಥಿತಿಯಲ್ಲಿ ನಾವಿದ್ದೇವೆ. ಭಾಷೆಯನ್ನು ಮರೆತು ಬಹುದೂರ ಸಾಗಿದ್ದೇವೆ. ಇದು ನಿಜಕ್ಕೂ ಶೋಚನೀಯ ಸ್ಥಿತಿ. ನಮ್ಮ ಭಾಷೆಯನ್ನೇ ಮಾತನಾಡಲು ಸಾಧ್ಯವಾಗದ ಸ್ಥಿತಿ ನಾಚಿಕೆಗೇಡು. ಭಾರತತ್ವವನ್ನೇ ಕಳೆದುಕೊಂಡು ಯಾವ ಸಾಧನೆಯೂ ಮಾಡಲಾಗದು. ಪೇಟೆಗಳಲ್ಲಿ ಸಂಸ್ಕೃತಿಯ ಬದಲು ವಿಕೃತಿ ಮೆರೆಯುವ ವಿಕಟ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದರು.

ಹೆಚ್ಚು ಹೆಚ್ಚು ಮಾತೃಭಾಷೆ ಮಾತನಾಡಬೇಕು. ಅಂಥ ಪರಿಸ್ಥಿತಿ ಬಂದಾಗ ಬೇರೆ ಭಾಷೆ ಮಾತನಾಡಿ; ಶೋಕಿಗಾಗಿ ಇಂಗ್ಲಿಷ್ ಪದಗಳ ಬಳಕೆ ಬೇಡ. ನಮ್ಮ ಭಾಷೆಯ ಬಗ್ಗ ನಾವು ಕೀಳರಿಮೆ ತಾಳಬಾರದು; ಮಾತೃಭಾಷೆಯನ್ನು ಎಂದೂ ತುಚ್ಛವಾಗಿ ಕಾರಣಬಾರದು ಎಂದು ಎಚ್ಚರಿಸಿದರು.

ಸ್ವಭಾಷಾ ಚಾತುರ್ಮಾಸ್ಯದ ಸಂದರ್ಭದಲ್ಲಿ ಮೂಲಮಠ ಪುನರುತ್ಥಾನದ ಸಂಕಲ್ಪವನ್ನು ಶ್ರೀಗಳು ಪ್ರಕಟಿಸಿದರು. ಮೂಲಮಠದ ಅಂಗಗಳು, ಕಟ್ಟಡಗಳು ಈಗಾಗಲೇ ನಿರ್ಮಾಣವಾಗಿವೆ. ಪ್ರಾಣಪ್ರತಿಷ್ಠೆಯ ಕಾರ್ಯ ಮಾತ್ರ ಆರಂಭವಾಗಬೇಕಿದೆ. ಮೂಲಮಠದ ಮೂಲ ಎನಿಸಿದ ಮಲ್ಲಿಕಾರ್ಜುನ ದೇಗುಲ ಪುನರುತ್ಥಾನವಾಗಿದೆ. ಸೇವಾಸೌಧ, ಗುರುದೃಷ್ಟಿ ಸಭಾಂಗಣ, ಸೇವಕ ಸೌಧ, ಗುರುಕುಲಗಳು, ಬೋಧಗ್ರಾಮ, ಗೋವಿಶ್ವ, ಸರೋವರಗಳು, ಭಾರತೀಭವನ, ವಿದ್ಯಾನಂದ, ಶೋಧಕೇಂದ್ರ, ಅಶ್ವಶಾಲೆ, ಯಾನಶಾಲೆ, ಕುಟೀರಗಳು, ಮಾತೃಭೂಮಿ ಸಮುಚ್ಛಯ ಸೇರಿ ₹೧೦೦ ಕೋಟಿಗೂ ಅಧಿಕ ಮೌಲ್ಯದ ಮೂಲಸೌಕರ್ಯಗಳು ಮೂಲಮಠದ ಭಾಗವಾಗಿ ನಿರ್ಮಾಣಗೊಂಡಿವೆ ಎಂದು ಹೇಳಿದರು.

ಮೂಲಮಠದ ಗರ್ಭಗೃಹ, ಚಂದ್ರಶಾಲೆಗಳ ಕಾರ್ಯ ಆರಂಭವಾಗಬೇಕಿದೆ. ಇದನ್ನು ತ್ವರಿತವಾಗಿ ಪೂರ್ಣಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ೨೦ ವರ್ಷಗಳ ಪ್ರಯತ್ನದ ಬಳಿಕ ಮೂಲಮಠದ ಜಾಗ ನಮ್ಮ ಕೈಸೇರಿದೆ. ಅಂಥ ಪ್ರಶಸ್ತವಾದ ಭೂಮಿ ನಮಗೆ ಪ್ರಾಪ್ತವಾಗಿದೆ ಎಂದು ವಿವರ ನೀಡಿದರು. ಮೂಲಮಠದ ನಿರ್ಮಾಣದಲ್ಲಿ ಸಮಾಜದ ಶಿಷ್ಯರೆಲ್ಲರೂ ಕೈಜೋಡಿಸಿದಲ್ಲಿ ಸಹಸ್ರಮಾನದ ಪುಣ್ಯ ಪ್ರಾಪ್ತವಾಗಲಿದೆ ಎಂದರು.

ಚಾತುರ್ಮಾಸ್ಯದಲ್ಲಿ ಪ್ರತಿ ಗುರುವಾರ ಗುರುಪರಂಪರೆಯ ಪ್ರೀತ್ಯರ್ಥವಾಗಿ ಲಕ್ಷ ತುಳಸಿ ಅರ್ಚನೆ ನೆರವೇರಿಸಲಾಗುವುದು. ವಿಷ್ಣುಸಹಸ್ರನಾಮದ ಅರ್ಚನೆಯಲ್ಲಿ ಇಡೀ ಸಮಾಜ ಭಾಗವಹಿಸಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಚಾತುರ್ಮಾಸ ವ್ರತಾರಂಭದ ಅಂಗವಾಗಿ ವ್ಯಾಸಪೂಜೆ ವಿಧ್ಯುಕ್ತವಾಗಿ ನೆರವೇರಿತು. ನೂತನ ಮಹಾಮಂಡಲ, ಶಾಸನತಂತ್ರ ಪದಾಧಿಕಾರಿಗಳ ಉದ್ಘೋಷಣೆ ನೆರವೇರಿತು. ಕನ್ನಡ ಭಾಷೆ- ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವ ಸ್ವಭಾಷಾ ಚಿಂತನ ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕೋಶಾಧ್ಯಕ್ಷ ಕೆ.ಬಿ.ರಾಮಮೂರ್ತಿ, ಮೂಲಮಠ ಪುನರುತ್ಥಾನ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಡಾ.ವೈ.ವಿ.ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಸತ್ಯನಾರಾಯಣ ಶರ್ಮಾ, ಡಿ.ಡಿ.ಶರ್ಮಾ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ ಇದ್ದರು. ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರೂಪಿಸಿದರು.

PREV