ನಮ್ಮ ಜೀವನ ಸಾಗುತ್ತಿದ್ದರೂ ನೆಮ್ಮದಿ ಎನ್ನುವುದು ಇಲ್ಲವಾಗಿದೆ.
ಭಟ್ಕಳ: ಶುದ್ಧ ಮನಸ್ಸಿನಿಂದ ಜಪತಪ ಮಾಡಿದರೆ ಮನಸ್ಸು ಶಾಂತವಾಗುತ್ತದೆ. ಮನಸ್ಸು ಶಾಂತವಾದರೆ ನಮ್ಮೆಲ್ಲ ಗೊಂದಲಗಳಿಗೆ ತೆರೆ ಎಳೆಯಬಹುದು ಎಂದು ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಶ್ರೀ ಹೇಳಿದರು.
ಅವರು ಶಿರಾಲಿಯ ಚಿತ್ರಾಪುರ ಮಠದಲ್ಲಿ ತಮ್ಮ ಚಾತುರ್ಮಾಸ್ಯ ಆರಂಭಿಸಿದ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ನಮ್ಮ ಜೀವನ ಸಾಗುತ್ತಿದ್ದರೂ ನೆಮ್ಮದಿ ಎನ್ನುವುದು ಇಲ್ಲವಾಗಿದೆ. ಗುರುವಿನ ಉಪಸ್ಥಿತಿ, ಉತ್ತಮ ಸಂಸ್ಕಾರ, ಈಶ್ವರನ ಅನುಗ್ರಹ ಪ್ರಾಪ್ತಿಯಾದರೆ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಚಿಂತನೆಯಿಂದ ಮನಸ್ಸನ್ನು ಶಾಂತವಾಗಿಡಬಹುದು. ಹೀಗಾಗಿ ಪ್ರತಿಯೊಬ್ಬರೂ ದೇವರ ಜಪ ಮಾಡಬೇಕು. ಜಪ ಮಾಡುವಾಗ ಮೊದಲು ಗುರುಸ್ಮರಣ, ಗುರುವಿನ ಪಾದುಕೆ ಸ್ಮರಣ ಮಾಡಿದಾಗ ನಮ್ಮ ಶರೀರವೂ ಅದಮ್ಯ ಚೈತನ್ಯ ಪಡೆದು ನಮ್ಮಲ್ಲಿನ ಎಲ್ಲ ಗೊಂದಲಗಳು ಕೆಲವು ಕ್ಷಣಗಳಿಗಾಗಿ ಹರಿದುಹೋಗಿ ಮನಸ್ಸು ಶಾಂತವಾಗುತ್ತದೆ. ಕೆಲವರು ಜಪಕ್ಕೆ ಕುಳಿತಾಗ ಮನವೂ ಚಂಚಲವಾಗುತ್ತದೆ. ಹಲವು ಯೋಚನೆಗಳು ಸುಳಿದಾಡುತ್ತವೆ. ಮೊದಲು ಗುರುಗಳ ಸನ್ನಿಧಿಯಲ್ಲಿ ಶಾಂತವಾಗಿ ಕೆಲವು ಸಮಯ ಕುಳಿತುಕೊಂಡಾಗ ಮನವು ಶಾಂತವಾಗುತ್ತದೆ. ಜಪ-ತಪದಿಂದ ಮೊದಲು ನಾನು ಎನ್ನುವ ಭಾವವು ಮಂದವಾಗುತ್ತದೆ. ಕಿವಿಗಳಲ್ಲಿ ಕೇಳದ ಶಾಂತತೆ ಮನಸ್ಸು ಅನುಭವಿಸಲು ಆರಂಭವಾಗುತ್ತದೆ. ಈಶ್ವರ ನಮ್ಮಲ್ಲೇ ಇದ್ದಾನೆ. ನಾವು ಬೇರೆಡೆ ಹುಡುಕುವ ಅವಶ್ಯಕತೆ ಇಲ್ಲ ಎನ್ನುವ ಭಾವ ಬರುತ್ತದೆ. ಆಗ ಸಂಸ್ಕಾರ ಜಾಗೃತಗೊಳ್ಳುತ್ತದೆ. ನಾನು ಗುರುವಿಗಾಗಿ, ನಮ್ಮ ಇಷ್ಟದೇವರಿಗಾಗಿ ಶಾಂತವಾಗಿ ಕುಳಿತು ಜಪ ಮಾಡಿದರೆ ನಮ್ಮಲ್ಲಿ ಧೈರ್ಯದ ಗುಣ ಬೆಳೆಯುತ್ತದೆ. ಶಾಂತಿ ದೊರೆಯುತ್ತದೆ. ಗುರುವಿನ ಅನುಗ್ರಹ ಪ್ರಾಪ್ತವಾದಲ್ಲಿ ನಮ್ಮಲ್ಲಿರುವ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದರು.
ಶ್ರೀಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ನಟ ಅನಂತನಾಗ್, ತಾನು ಚಿಕ್ಕವನಿದ್ದಾಗ ಚಿತ್ರಾಪುರ ಮಠದಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದೆ. ಶ್ರೀರಾಮದಾಸರು, ಸ್ವಾಮಿ ಪರಿಜ್ಞಾನಶ್ರಮ ಗುರುಗಳು, ಸದ್ಯೋಜಾತ ಗುರುಗಳ ಆಶೀರ್ವಾದದಿಂದ ಇಲ್ಲಿನ ಸಂಸ್ಕಾರ ಪಡೆದಿದ್ದೇನೆ. ೧೯೯೮ರಲ್ಲಿ ನನಗೆ ಯಾವುದೇ ಪ್ರಶಸ್ತಿ ದೊರೆಯುವ ಮೊದಲೆ ಶ್ರೀಗಳೆ ನನಗೆ ಮೊದಲು ಗೌರವಿಸಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ ನೀಡಿದ್ದರು ಎಂದು ಭಾವುಕರಾಗಿ ನುಡಿದರು.
ಶ್ರೀಗಳು, ನಟ ಅನಂತನಾಗ ಪತ್ನಿ ಮತ್ತು ಪುತ್ರಿಯರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಚಿತ್ರಾಪುರ ಮಠದ ಅಧ್ಯಕ್ಷ ಪ್ರವೀಣ ಕಡ್ಲೆ, ಶಿರಸಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜೈದೇವ ನಿಲೇಕಣಿ ಸೇರಿದಂತೆ ದೇಶ ವಿದೇಶಗಳಿಂದ ಭಕ್ತರು ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.