ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ಶಿಕ್ಷಣ ಮಟ್ಟ ಕುಸಿದಿರುವುದು ಎನ್‌ಜಿಒ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಐದನೇ ತರಗತಿ ಓದುತ್ತಿರುವ ೧೦೦ ಮಕ್ಕಳಲ್ಲಿ ೫೦ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಓದಲು ಬರುವುದಿಲ್ಲ. ಇದು ಪ್ರಸ್ತುತ ರಾಜ್ಯದ ಶೈಕ್ಷಣಿಕ ಗುಣಮಟ್ಟವಾಗಿದೆ. ಮಕ್ಕಳಿಗೆ ಮೌಲ್ಯವುಳ್ಳ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂಘದ ಯುವ ಘಟಕದ ಅಧ್ಯಕ್ಷ ಪ್ರೊ.ಸಂತೋಷ್ ಉಚಿತ ತರಬೇತಿ ನೀಡಲು ಮುಂದಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನವೋದಯ ಪರೀಕ್ಷೆಗೆ ಸಂಬಂಧಪಟ್ಟ ಸಿಲೆಬಸ್‌ನ್ನು ಯೂಟ್ಯೂಬ್‌ನಲ್ಲಿ ಉಚಿತವಾಗಿ ಪಾಠ ಮಾಡಿ ಅಪ್ಲೋಡ್ ಮಾಡಲಾಗಿದೆ. ದಿನದ ಯಾವುದೇ ಸಮಯದಲ್ಲಿ ಯಾರು ಬೇಕಾದರೂ ವೀಕ್ಷಿಸಬಹುದು. ೮೧೦೫೩೪೮೨೯೦ ಫೋನ್‌ಗೆ ಮೆಸೇಜ್ ಮಾಡಿದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಪಿಡಿಎಫ್ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು. ಮಕ್ಕಳು ಮನೆಯಲ್ಲೇ ಕುಳಿತು ಕೋಚಿಂಗ್ ಕೇಂದ್ರಗಳಿಗೆ ಹೋಗದೆ ಅಭ್ಯಾಸ ಮಾಡಿದರೆ ಕನಿಷ್ಠವೆಂದರೂ ವಾರ್ಷಿಕ ೨೫ ಸಾವಿರ ರು. ಹಣ ಉಳಿತಾಯ ಮಾಡಬಹುದು ಎಂದು ತಿಳಿಸಿದರು.ರೈತಸಂಘದ ಯುವ ಘಟಕ ಅಧ್ಯಕ್ಷ ಪ್ರೊ.ಸಂತೋಷ್ ಮಾತನಾಡಿ, ನವೋದಯ ಪರೀಕ್ಷೆ ತರಬೇತಿ ಪಡೆಯುವುದರಿಂದ ಮಕ್ಕಳು ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಅವರ ಬುದ್ಧಿ ಸಾಮರ್ಥ್ಯ, ಭಾಷೆಯ ಮೇಲಿನ ಹಿಡಿತ, ಗಣಿತ ವಿಷಯದಲ್ಲಿ ಮಾಸ್ಟರ್ ಪೀಸ್ ಆಗುವರೆಂದು ದೃಢವಾಗಿ ಹೇಳಿದರು. ರಾಜ್ಯದ ಶಿಕ್ಷಣ ಮಟ್ಟ ಸುಧಾರಿಸದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯದಲ್ಲಿ ಐದನೇ ತರಗತಿ ಓದುವ ಮಕ್ಕಳು ತಪ್ಪದೇ ನವೋದಯ ಪರೀಕ್ಷೆ ಬರೆಯುವಂತೆ ಮಾಡಲು ಪೋಷಕರು ಗಮನ ಹರಿಸಬೇಕಿದೆ ಎಂದು ಹೇಳಿದರು.
ಸರ್ಕಾರ ಪ್ರತಿಯೊಂದು ಶಾಲೆಯಲ್ಲೂ ಸ್ಮಾರ್ಟ್ ಟಿವಿ ಅಳವಡಿಸಿದರೆ ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೂ ನಾನೇ ಸಿಬಿಎಸ್‌ಸಿ ಪಠ್ಯಕ್ರಮದ ಪಾಠವನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಮಾಡಲು ಸಿದ್ಧನಿದ್ದೇನೆ ಎಂದು ಖಚಿತವಾಗಿ ನುಡಿದರು.ಗೋಷ್ಠಿಯಲ್ಲಿ ತಾಲೂಕು ಕಾರ್ಯದರ್ಶಿ ಸುರೇಶ್, ಮುಖಂಡ ಕುಮಾರ್ ಇದ್ದರು.