ಹತ್ತು ಸಾವಿರಕ್ಕಾಗಿ ಯುವಕನಿಗೆ ಚಾಕು ಇರಿತ

KannadaprabhaNewsNetwork |  
Published : Jul 11, 2025, 01:47 AM IST
ರಾಜು ಗಾಯಕವಾಡ | Kannada Prabha

ಸಾರಾಂಶ

ರಾಜುನೊಂದಿಗೆ ನಗರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮಲ್ಲಿಕನು ಮಹಾಂತೇಶನಿಗೆ ಈ ಹಿಂದೆ ₹10 ಸಾವಿರ ಸಾಲ ನೀಡಿದ್ದನು. ಹಣ ವಸೂಲಿಗೆ ಹಲವು ಬಾರಿ ಮಹಾಂತೇಶನಿಗೆ ಕೇಳಿ ಕೇಳಿ ಬೇಸತ್ತು ಗುರುವಾರ ಮನೆಗೆ ಬಂದಿದ್ದಾನೆ. ಮಹಾಂತೇಶ ಮನೆಯಲ್ಲಿ ಇಲ್ಲದ್ದರಿಂದ ರಾಜುವಿನೊಂದಿಗೆ ಹಣದ ವಿಚಾರವಾಗಿ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ರಾಜುವಿಗೆ ಚಾಕು ಇರಿಯಲಾಗಿದೆ.

ಧಾರವಾಡ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾವೇರಿಪೇಟ ಬಡಾವಣೆಯ ಕಂಠಿಗಲ್ಲಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಕಂಠಿಗಲ್ಲಿಯ ನಿವಾಸಿ ರಾಜು ಗಾಯಕವಾಡ (25) ಎಂಬಾತನ ಮನೆಯಲ್ಲಿಯೇ ದುಷ್ಕರ್ಮಿಗಳು ಆತನಿಗೆ ಚಾಕು ಇರಿದಿದ್ದು, ರಾಜು ಸ್ಥಿತಿ ಗಂಭೀರವಾಗಿದೆ. ಆತನನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ರವಾನೆ ಮಾಡಲಾಗಿದೆ. ಚಾಕುವಿನ ಇರಿತ ಅದೆಷ್ಟು ತೀವ್ರವಾಗಿತ್ತೆಂದರೆ ಚಾಕು ಮುರಿದು ಯುವಕನ ಬೆನ್ನಿನಲ್ಲಿಯೇ ಉಳಿದಿದೆ.

ಏನಿದು ಘಟನೆ?: ಕಟ್ಟಡ ಕೆಲಸ ಮಾಡಿಕೊಂಡಿದ್ದ ರಾಜು ಮನೆಯಲ್ಲಿಯೇ ಇದ್ದಾಗ ಇಬ್ಬರು ಬಂದು ಹಲ್ಲೆ ಮಾಡಿ, ಈತನ ಬೆನ್ನಿಗೆ ಚಾಕುವಿನಿಂದ ಹಲವಾರು ಬಾರಿ ಇರಿದಿದ್ದಾರೆ. ಕೊನೆಗೆ ಜೋರಾಗಿ ಚಾಕು ಇರಿದಿದ್ದಕ್ಕೆ ಅಲ್ಲಿಯೇ ಮುರಿದು ಹೋಗಿದೆ. ಹಲ್ಲೆಕೋರರು ಕೂಡಲೇ ಅಲ್ಲಿಂದ ಬೈಕ್ ಮೇಲೆ ಪರಾರಿಯಾಗಿದ್ಧಾರೆ. ಬಳಿಕ ರಾಜು ಮನೆಯಿಂದ ಚೀರುತ್ತಾ ಹೊರಗೆ ಬಂದು ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ.

ಘಟನೆ ಕಾರಣ?: ಈ ಘಟನೆಗೆ ಕಾರಣ ಹಣಕಾಸಿನ ವ್ಯವಹಾರ ಎಂದು ತಿಳಿದು ಬಂದಿದೆ. ರಾಜುವಿನ ಅಣ್ಣ ಮಹಾಂತೇಶ ಗೋವಾದಲ್ಲಿ ಲ್ಯಾಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ರಾಜುನೊಂದಿಗೆ ನಗರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮಲ್ಲಿಕನು ಮಹಾಂತೇಶನಿಗೆ ಈ ಹಿಂದೆ ₹10 ಸಾವಿರ ಸಾಲ ನೀಡಿದ್ದನು. ಹಣ ವಸೂಲಿಗೆ ಹಲವು ಬಾರಿ ಮಹಾಂತೇಶನಿಗೆ ಕೇಳಿ ಕೇಳಿ ಬೇಸತ್ತು ಗುರುವಾರ ಮನೆಗೆ ಬಂದಿದ್ದಾನೆ. ಮಹಾಂತೇಶ ಮನೆಯಲ್ಲಿ ಇಲ್ಲದ್ದರಿಂದ ರಾಜುವಿನೊಂದಿಗೆ ಹಣದ ವಿಚಾರವಾಗಿ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ರಾಜುವಿಗೆ ಚಾಕು ಇರಿಯಲಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಈ ಬಡಾವಣೆಯಲ್ಲಿ ಹಿಂದೂ-ಮುಸ್ಲಿಂ ಎರಡೂ ಸಮುದಾಯದವರು ವಾಸವಾಗಿದ್ದು, ಇದೀಗ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿದ್ದರಿಂದ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆ ನಡೆದ ಕೂಡಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು. ಇನ್ನು ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಉಪನಗರ ಠಾಣೆ ಪೊಲೀಸರು ಬಲೆ ಬೀಸಿದ್ಧಾರೆ. ಒಟ್ಟಿನಲ್ಲಿ ಸಣ್ಣ ಮೊತ್ತದ ಹಣಕ್ಕಾಗಿ ಇಂತಹದೊಂದು ಹೀನ ಕೃತ್ಯಕ್ಕೆ ಹಲ್ಲೆಕೋರರು ಮುಂದಾಗಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿರುವುದು ಸತ್ಯ.

PREV