ರೈತರ ಭೂಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ರಾಘವೇಂದ್ರ ಭರವಸೆ

KannadaprabhaNewsNetwork | Published : Oct 23, 2024 12:33 AM

ಸಾರಾಂಶ

ಮಲೆನಾಡು ರೈತರ ಭೂಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಸಕಾರಾತ್ಮಕ ಪ್ರಯತ್ನ ನಡೆಸಲಾಗುತ್ತದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಜೊತೆ ಹಿರಿಯರ ಮಾರ್ಗದರ್ಶನದಲ್ಲಿ ಮಾತುಕತೆ ನಡೆಸಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ಕನ್ನಡಪ್ರಭವಾರ್ತೆ ಸಾಗರ

ಮಲೆನಾಡು ರೈತರ ಭೂಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಸಕಾರಾತ್ಮಕ ಪ್ರಯತ್ನ ನಡೆಸಲಾಗುತ್ತದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಜೊತೆ ಹಿರಿಯರ ಮಾರ್ಗದರ್ಶನದಲ್ಲಿ ಮಾತುಕತೆ ನಡೆಸಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಡಾ.ಎಚ್.ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ, ಮಲೆನಾಡು ಭೂರಹಿತರ ಹೋರಾಟ ವೇದಿಕೆ ಇನ್ನಿತರೆ ಸಂಘಟನೆಗಳ ಆಶ್ರಯದಲ್ಲಿ ಭೂಸಮಸ್ಯೆ ನಿವಾರಣೆಗೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮಲೆನಾಡು ರೈತರ ಸಮಸ್ಯೆಯನ್ನು ತಲುಪಿಸುವ ಕೆಲಸ ಮಾಡಿದ್ದು. ಶೀಘ್ರದಲ್ಲಿಯೆ ಮಲೆನಾಡಿನ ಸಂಸದರ ಜೊತೆ ಪಕ್ಷಾತೀತವಾಗಿ ರೈತರಿಗೆ ಮಾರಕವಾಗುತ್ತಿರುವ ಕಾಯ್ದೆ ತಿದ್ದುಪಡಿಗೆ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡುವುದಾಗಿ ಹೇಳಿದರು.

ಅರಣ್ಯಹಕ್ಕು ಭೂಮಂಜೂರಾತಿಗೆ ಮೂರು ತಲೆಮಾರಿನಿಂದ ಒಂದು ತಲೆಮಾರಿಗೆ ಇಳಿಸಬೇಕು ಎನ್ನುವ ಬಗ್ಗೆ ಕೇಂದ್ರದಲ್ಲಿ ಮೊದಲ ಬಾರಿಗೆ ನಾನು ಮಾತನಾಡಿದ್ದೇನೆ ಎಂದ ಸಂಸದರು, ಪದೇಪದೆ ರೈತರ ಭೂಮಂಜೂರಾತಿ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ರಿಟ್ ಹಾಕುತ್ತಿರುವ ಪರಿಸರವಾದಿಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಭೂಹಕ್ಕಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.ಜಯಂತ್ ಮಾತನಾಡಿ, ಅರಣ್ಯ ಇಲಾಖೆ ಕಾನೂನಿನಿಂದ ಮಲೆನಾಡು ರೈತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಒಂದಿಲ್ಲೊಂದು ಕಾನೂನಿನ ತೊಡಕಿನಲ್ಲಿ ರೈತರನ್ನು ಸಿಲುಕಿಸಿ ಅಧಿಕಾರಿಗಳು ವಿಜೃಂಭಿಸುತ್ತಿದ್ದಾರೆ. ಕಳೆದ ಆರೂವರೆ ದಶಕಗಳಿಂದ ಶರಾವತಿ ಮುಳುಗಡೆ ಸಂತ್ರಸ್ತರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ೧೯೯೬ರ ಹಿಂದೆ ಅರಣ್ಯದಲ್ಲಿವಾಸ ಮಾಡುತ್ತಿರುವವರನ್ನು ಅರಣ್ಯೇತರ ಉದ್ದೇಶ ಎಂದು ಪರಿಗಣಿಸಿ ಅವರನ್ನು ಕಾಯ್ದೆಯಿಂದ ಕೈಬಿಡಲು ಆದೇಶ ಹೊರಡಿಸಿದೆ. ಅದು ಕಟ್ಟುನಿಟ್ಟಾಗಿ ತಕ್ಷಣ ಜಾರಿಗೆ ಬರಬೇಕು. ಅರಣ್ಯ ಇಲಾಖೆಯ ಕೆಲವು ಕಠೋರ ಕಾಯ್ದೆಗಳು ರೈತರನ್ನು ಕ್ಷಣಕ್ಷಣಕ್ಕೂ ಭಯಭೀತಗೊಳಿಸುತ್ತಿವೆ. ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಮಲೆನಾಡು ರೈತರ ಭೂಮಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಮಲೆನಾಡು ರೈತರು ಪ್ರತಿದಿನ ಹೊಸಹೊಸ ಕಾಯ್ದೆಯಿಂದ ಸತ್ತು ಬದುಕುವುದಕ್ಕಿಂತ ಅವರಿಗೆ ಕೇಂದ್ರ ಸರ್ಕಾರದ ಮನವೊಲಿಸಿ ದಯಾಮರಣಕ್ಕೆ ಅವಕಾಶ ಕಲ್ಪಿಸಿಕೊಡಿ. ಹಲವು ದಶಕಗಳಿಂದ ಮಲೆನಾಡು ರೈತರು ಭೂಮಿಗಾಗಿ ಹೋರಾಟ ಮಾಡುತ್ತಿದ್ದಾರೆ. ತಕ್ಷಣ ಸಂಸದರು ಪ್ರಧಾನ ಮಂತ್ರಿ ಭೇಟಿಯಾಗಿ ಅರಣ್ಯ ಕಾಯ್ದೆಯನ್ನು ಸಡಲಗೊಳಿಸಬೇಕು. ರಾಜ್ಯ ಸರ್ಕಾರ ಮಲೆನಾಡು ರೈತರ ಸಮಸ್ಯೆ ತಕ್ಷಣ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ, ಭದ್ರೇಶ್, ಹೊಯ್ಸಳ ಗಣಪತಿಯಪ್ಪ, ಪ್ರಮುಖರಾದ ತೀ.ನ.ಶ್ರೀನಿವಾಸ್, ಶಿವಾನಂದ ಕುಗ್ವೆ, ಪರಮೇಶ್ವರ ದೂಗೂರು, ಮಲ್ಲಿಕಾರ್ಜುನ ಹಕ್ರೆ, ಎನ್.ಡಿ.ವಸಂತ ಕುಮಾರ್, ಡಾ. ರಾಜನಂದಿನಿ ಕಾಗೋಡು, ಟಿ.ಡಿ.ಮೇಘರಾಜ್, ದೇವೇಂದ್ರಪ್ಪ, ಮಧುರಾ ಶಿವಾನಂದ್, ಡಾ. ರಾಮಪ್ಪ, ರವಿಕುಮಾರ್ ಸಿಗಂದೂರು, ರತ್ನಾಕರ ಹೊನಗೋಡು, ಭರ್ಮಪ್ಪ ಅಂದಾಸುರ, ರೇವಪ್ಪ ಹೊಸಕೊಪ್ಪ ಇನ್ನಿತರರು ಹಾಜರಿದ್ದರು.

ಸಿಇಒ ವಾಹನ ಅಡ್ಡಗಟ್ಟಿದ ರೈತರು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್ ಕುಮಾರ್, ಈಗಾಗಲೆ ಜಿಲ್ಲಾಧಿಕಾರಿಗಳು ರೈತರ ಸಮಸ್ಯೆ ಬಗೆಹರಿಸಲು ಟಾಸ್ಕ್‌ಫೋರ್ಸ ರಚಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕಂದಾಯ ಇಲಾಖೆ ಕಾರ್ಯದರ್ಶಿಯವರಿಗೆ ವಿಷಯ ತಿಳಿಸಿದ್ದು ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಪ್ರತಿಭಟನೆ ವಿಷಯ ಸರ್ಕಾರಕ್ಕೆ ತಿಳಿಸಿ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಾರ್ಯನಿರ್ವಾಹಣಾಧಿಕಾರಿ ಉತ್ತರದಿಂದ ರೈತರು ಸಂತುಷ್ಟರಾಗದೆ ಸ್ಥಳದಲ್ಲಿಯೆ ಪರಿಹಾರ ಕಲ್ಪಿಸಿ ಎಂದು ಪಟ್ಟು ಹಿಡಿದರು. ಆದರೆ ಸಿಇಒ ಸ್ಥಳದಿಂದ ತಮ್ಮ ವಾಹನದ ಬಳಿ ಹೊರಡಲು ಮುಂದಾದಾಗ ರೈತರು ಉಪವಿಭಾಗಾಧಿಕಾರಿ ಕಚೇರಿಯ ಗೇಟ್ ಹಾಕಿ, ಅಧಿಕಾರಿ ಕಾರಿನ ಎದುರು ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಸ್ವಲ್ಪಕಾಲ ಸ್ಥಳದಲ್ಲಿ ಪ್ರಕ್ಷಬ್ಧ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ರೈತರನ್ನು ಸಮಾಧಾನಪಡಿಸಿ ಸಿಇಒ ತೆರಳಲು ಅನುವು ಮಾಡಿಕೊಟ್ಟರು

Share this article