- ಎಸ್ಸಿ-ಎಸ್ಟಿ ಕುಂದುಕೊರತೆ ಚರ್ಚೆ ಸಭೆಯಲ್ಲಿ ಎಸ್‌ಪಿ ಉಮಾ ಪ್ರಶಾಂತ ಭರವಸೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಪರಿಶಿಷ್ಟ ಜಾತಿ-ಪಂಗಡ ಸಮುದಾಯಗಳ ಜನರ ಸಮಸ್ಯೆ, ಪ್ರಚಲಿತ ವಕ್ಫ್ ಬೋರ್ಡ್ ಆಸ್ತಿ ವಿವಾದ ಸೇರಿದಂತೆ ಕೆಲ ಪ್ರಮುಖ ವಿಚಾರಗಳ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸುವ ಜೊತೆಗೆ ಪೊಲೀಸ್ ಇಲಾಖೆಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಇಲಾಖೆ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯಗಳ ಕುಂದುಕೊರತೆ ಚರ್ಚಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಕ್ಫ್ ಆಸ್ತಿ ವಿವಾದ ಸೇರಿದಂತೆ ಸರ್ಕಾರದ ಮಟ್ಟದಲ್ಲಿ, ಜಿಲ್ಲಾಡಳಿತದ ಹಂತದ ಕೆಲವು ಮುಖ್ಯ ವಿಚಾರಗಳ ಬಗ್ಗೆ ಡಿಸಿ ಅವರ ಜೊತೆ ಚರ್ಚಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ರುದ್ರಭೂಮಿ ಇನ್ನಿತರೆ ಸಮಸ್ಯೆ ಕುರಿತಂತೆ ಜಿಪಂ ಸಿಇಒ ಗಮನಕ್ಕೆ ತರಲಾಗುವುದು. ಅಕ್ರಮ ಸಾರಾಯಿ ಮಾರಾಟ, ಸಂಚಾರ ದಟ್ಟಣೆ, ಗಲಾಟೆ, ಜನರಿಗೆ ಕಿರಿಕಿರಿ ಪ್ರಕರಣಗಳ ವಿರುದ್ಧವೂ ಇಲಾಖೆ ಕ್ರಮ ಜರುಗಿಸಲಿದೆ ಎಂದರು.
ಜಿಲ್ಲೆಯ ವಿವಿಧ ತಾಲೂಕುಗಳ ಪರಿಶಿಷ್ಟ ಜಾತಿ-ಪಂಗಡಗಳ ಮುಖಂಡರು, ದಲಿತ ಸಂಘಟನೆಗಳ ಮುಖಂಡರು, ವಿವಿಧ ಸಮುದಾಯಗಳ ಮುಖಂಡರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನರು ಪಾಲ್ಗೊಂಡು, ಪರಿಶಿಷ್ಟರ ಸಮಸ್ಯೆಗಳ ಬಗ್ಗೆ ಜಿಲ್ಲಾ ಪೊಲೀಸ ಇಲಾಖೆ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ, ಅಬಕಾರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆ ಸಮಸ್ಯೆಗಳ ಬಗ್ಗೆ ವಿವರಿಸಿದರು.ಎಎಸ್‌ಪಿಗಳಾದ ಎಂ.ಸಂತೋಷ, ಚನ್ನಗಿರಿ ಉಪ ವಿಭಾಗದ ಎಎಸ್‌ಪಿ ಸ್ಯಾಮ್ ವರ್ಗೀಸ್, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕ ಎಸ್.ಲಕ್ಷ್ಮಣ ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಎಚ್.ಬಸವರಾಜ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಚ್.ನಾಗೇಂದ್ರಪ್ಪ, ಅಬಕಾರಿ ಇಲಾಖೆ ಹೊನ್ನಾಳಿ ಉಪಾಧೀಕ್ಷಕ ಎಸ್.ಎಸ್.ಪ್ರೇಮ್ ಸಿಂಗ್, ಕೆಎಸ್ಸಾರ್ಟಿಸಿ ಜಿಲ್ಲಾ ಸಾರಿಗೆ ಅಧಿಕಾರಿ (ಡಿಟಿಒ) ಡಿ.ಫಕೃದ್ದೀನ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ ಎಂ.ಸುರೇಶ, ಪಾಲಿಕೆ ಇಇ ಎಂ.ಎಚ್.ಉದಯಕುಮಾರ, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿ ಪೊಲೀಸ್ ನಿರೀಕ್ಷಕ ಉಮೇಶ ಬಾಬು ಇತರರು ಇದ್ದರು.
- - -ಕೋಟ್ ಪರಿಶಿಷ್ಟರ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಇನ್ನು ಮುಂದೆ ಪ್ರತಿ ತಿಂಗಳು ಆಯಾ ಠಾಣಾ ಮಟ್ಟದಲ್ಲೇ ನಡೆಯುವ ಸಭೆಗಳಲ್ಲಿ ಠಾಧಿಕಾರಿಗಳು ಪಾಲ್ಗೊಂಡು, ಪರಿಹರಿಸಲಿದ್ದಾರೆ. ನಮ್ಮ ಮಟ್ಟದಲ್ಲಿ ಬಗೆಹರಿಯುವ ಸಮಸ್ಯೆಗಳಿದ್ದರೆ, ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ
- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ- - - -20ಕೆಡಿವಿಜಿ8:
ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ನೇತೃತ್ವದಲ್ಲಿ ನಡೆದ ಎಸ್ಸಿ-ಎಸ್ಟಿ ಕುಂದುಕೊರತೆ ಚರ್ಚೆ ಸಭೆಯಲ್ಲಿ ದಲಿತ ಮುಖಂಡರು ಮಾತನಾಡಿದರು.