ಭಟ್ಕಳ: ಭಟ್ಕಳದ ಸರ್ಕಾರಿ ಆಸ್ಪತ್ರೆಯನ್ನು 250 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಸರ್ಕಾರದಿಂದ ಇದು ಸದ್ಯದಲ್ಲೇ ಮಂಜೂರಿಯಾಗುವ ಭರವಸೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ತಿಳಿಸಿದರು.
ಆಸ್ಪತ್ರೆಯಲ್ಲಿ ಯಾವುದೇ ದೂರು ಬರದಂತೆ ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಆಸ್ಪತ್ರೆಗೆ ಅನೇಕ ದಾನಿಗಳು ಸಹಕಾರ ನೀಡಿದ್ದು, ಇನ್ನೂ ಅಗತ್ಯವಿರುವುದನ್ನು ನೀಡಲು ಸಿದ್ಧರಿದ್ದಾರೆ. ಇರುವುದನ್ನು ಬಳಸಿಕೊಂಡು ಅಗತ್ಯವಿದ್ದವರಿಗೆ ಉತ್ತಮ ಸೇವೆ ನೀಡುವುದೇ ಇಲ್ಲಿನ ಆಸ್ಪತ್ರೆಯಲ್ಲಿ ಇಷ್ಟೊಂದು ಜನರು ಚಿಕಿತ್ಸೆ ಪಡೆಯುವುದಕ್ಕೆ ಬರಲು ಕಾರಣವಾಗಿದೆ ಎಂದ ಅವರು, ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಹಾಗೂ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಆಸ್ಪತ್ರೆಯ ಖರ್ಚು ವೆಚ್ಚಗಳ ವರದಿಯನ್ನು ವಿವರಿಸಿದರು.ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ವಾಹನ ನಿಲುಗಡೆಗೆ ಸಮಸ್ಯೆ ಇದ್ದು, ತೊಂದರೆಯಾಗುತ್ತಿದೆ. ಆಸ್ಪತ್ರೆಗೆ ಬರುವ ರಸ್ತೆಯು ಸಂಪೂರ್ಣ ಹಾಳಾಗಿದ್ದು, ನೀರು ನಿಂತು ತೊಂದರೆಯಾಗುತ್ತಿದೆ. ಬ್ಲಡ್ ಬ್ಯಾಂಕ್ ಸಿಬ್ಬಂದಿ ಕೊರತೆಯಿಂದ ತೊಂದರೆಯಾಗಿದೆ. ಸರ್ಜನ್ ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಶಸ್ತ್ರಚಿಕಿತ್ಸೆಯನ್ನು ಮಾಡಿ ಉಳಿದ ದಿನಗಳಲ್ಲಿ ಒಪಿಡಿಯಲ್ಲಿ ಸೇವೆ ಸಲ್ಲಿಸುವ ಕುರಿತು ಚಿಂತಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಬರುವ ರೋಗಿಗಳಿಗೆ ಅಗತ್ಯವಿರುವ ಬೆಡ್ ಒದಗಿಸುವುದು ಕಷ್ಟಕರವಾಗುತ್ತಿದೆ ಎಂದರು.