ಮಳೆಗಾಲದ ತುರ್ತು ಕಾಮಗಾರಿಗೆ ಅಧಿಕಾರಿಗಳ ನಿರಾಸಕ್ತಿ: ಮಂಗಳೂರು ಪಾಲಿಕೆ ವಿಶೇಷ ಸಭೆಯಲ್ಲಿ ಸದಸ್ಯರ ತರಾಟೆ

KannadaprabhaNewsNetwork | Published : Jun 15, 2024 1:03 AM
Follow Us

ಸಾರಾಂಶ

ಮಳೆಗಾಲದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚರಿಕೆ ಕ್ರಮಗಳು ಹಾಗೂ ಸಂಭವಿಸಬಹುದಾದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂಗಾರು ಅವಧಿಯಲ್ಲಿ ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳು ಪಾಲಿಕೆ ವ್ಯಾಪ್ತಿಯಲ್ಲಿ ಸರಿಯಾಗಿ ನಡೆಯುತ್ತಿಲ್ಲ. ಅಧಿಕಾರಿಗಳಲ್ಲಿ ಸಮನ್ವಯದ ಕೊರತೆ ಕಾಣುತ್ತಿದ್ದು, ಅವರಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಪಾಲಿಕೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನ ಶುಕ್ರವಾರ ಪಾಲಿಕೆಯ ವಿಶೇಷ ಸಭೆಯಲ್ಲಿ ನಡೆದಿದೆ.ಮಳೆಗಾಲದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚರಿಕೆ ಕ್ರಮಗಳು ಹಾಗೂ ಸಂಭವಿಸಬಹುದಾದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಿತು.

ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ನಗರದ ಅನೇಕ ಕಡೆಗಳಲ್ಲಿ ಮಳೆಗಾಲದಲ್ಲಿಯೂ ರಸ್ತೆ ಅಗೆದು ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಬಹು ಸಮಸ್ಯೆಯಾಗುತ್ತಿದ್ದು, ಫುಟ್‌ಪಾತ್‌, ರಸ್ತೆ ಕುಸಿತ ಉಂಟಾಗುವ ಸಾಧ್ಯತೆ ಇದೆ. ರಸ್ತೆ ಅಗೆತ ಕಾಮಗಾರಿ ನಿಲ್ಲಿಸಲು ಆಯುಕ್ತರು ಸೂಚನೆ ನೀಡಬೇಕು. ಮೂಲಭೂತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾರ್ಡ್‌ವಾರು ಸಭೆ ನಡೆಸಬೇಕು. ತೀವ್ರ ಮಳೆಗೆ ಭೂಕುಸಿತ ಉಂಟಾಗುವ ಸಾಧ್ಯತೆ ಇದ್ದು, ತಡೆಗೋಡೆ ನಿರ್ಮಾಣ ಆಗಬೇಕು. ಅಲ್ಲಿ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮಳೆಗಾಲದ ಹಿನ್ನೆಲೆಯಲ್ಲಿ ಅಧಿಕಾರಿಗಳು ‘ನಮ್ಮ ಮಂಗಳೂರು’ ಎಂಬ ಭಾವನೆಯಿಂದ ಕೆಲಸ ನಿರ್ವಹಿಸಬೇಕು. ಮಳೆಗಾಲದ ಹಿನ್ನೆಲೆಯಲ್ಲಿ ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ಪ್ರತೀ ವಾರ್ಡ್‌ಗೆ ಒಬ್ಬರಂತೆ ಇನ್ಸಿಡೆಂಟ್‌ ಕಮಾಂಡರ್‌ ನೇಮಕ ಮಾಡಲಾಗಿದೆ. ಸಮಸ್ಯೆಗಳಿಗೆ ತತ್‌ಕ್ಷಣ ಸ್ಪಂದಿಸಬೇಕು ಎಂದು ಅವರಿಗೆ ಸೂಚನೆ ನೀಡಲಾಗಿದೆ. ಮುಂಗಾರು ಮುಂಜಾಗ್ರತೆ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಪ್ರತ್ಯೇಕ ಗ್ಯಾಂಗ್‌ ಸನ್ನದ್ಧವಾಗಿರಬೇಕು. ಅಗತ್ಯ ಸಂದರ್ಭಕ್ಕೆ ಎರಡು ಜೆಸಿಬಿ ಸಿದ್ಧವಿರಿಸಬೇಕು ಎಂದು ಅವರು ಹೇಳಿದರು.

ವಿಪಕ್ಷ ನಾಯಕ ಪ್ರವೀಣ್‌ ಚಂದ್ರ ಆಳ್ವ ಮಾತನಾಡಿ, ನಗರದಲ್ಲಿ ಹಲವು ಕಡೆ ರಾಜಕಾಲುವೆ ಹೂಳೆತ್ತುವ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆ ಉಂಟಾದರೆ ಸಂಬಂಧಿತ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ ಎಂದರು.

ಮಾಜಿ ಮೇಯರ್‌ ಶಶಿಧರ ಹೆಗ್ಡೆ ಮಾತನಾಡಿ, ಸಾರ್ವಜನಿಕರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಆದ್ಯತೆ ನೀಡಬೇಕಾಗಿದೆ. ಅರಣ್ಯ, ಅಗ್ನಿಶಾಮಕ ದಳ, ಅರಣ್ಯ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳ ಸಂಖ್ಯೆಯನ್ನು ಪ್ರಕಟನೆ ನೀಡಬೇಕು ಎಂದು ಹೇಳಿದರು. ಸದಸ್ಯೆ ಶೋಭಾ ಪೂಜಾರಿ ಮಾತನಾಡಿ, ಬಜಾಲ್‌ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತು ಸಮಸ್ಯೆ ಉಂಟಾಗುತ್ತದೆ ಎಂದರು. ಮೇಯರ್‌ ಪ್ರತಿಕ್ರಿಯಿಸಿ, ದಿನದ 24 ಗಂಟೆ ಪಂಪಿಂಗ್‌ ನಡೆಸಬೇಕು. ಚರಂಡಿ ಕೆಲಸ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಭೆಯಲ್ಲಿ ನಗರದ ಬಹುತೇಕ ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ತೋಡಿಕೊಂಡರು.ಉಪಮೇಯರ್‌ ಸುನಿತಾ ಇದ್ದರು.