ನಿರ್ಮಾಣ ಕಾರ್ಯ । ಅರಣ್ಯೀಕರಣ ಪ್ರಕ್ರಿಯೆಗೆ ಚಾಲನೆ । 250ಕ್ಕೂ ಅಧಿಕ ಜಾತಿಯ ಗಿಡಗಳನ್ನು ನೆಟ್ಟ ಪುಟಾಣಿಗಳು । 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ನಗರದ ಜಯನಗರ ಬಡಾವಣೆಯಲ್ಲಿ ಹಸಿರುಭೂಮಿ ಪ್ರತಿಷ್ಠಾನ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಯನಗರ ಘಟಕ, ಮುಂಜಾನೆ ಮಿತ್ರರು ಹಾಗೂ ಸ್ಥಳೀಯ ನಾಗರಿಕರ ಸಹಭಾಗಿತ್ವದಲ್ಲಿ ಮಿಯಾವಾಕಿ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭಗೊಂಡಿತು. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸುಮಾರು 250ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಬಡಾವಣೆಯ ಪುಟಾಣಿಗಳಾದ ಮೋನಾಕ್ಷಿ, ರಂಜನ್, ಪಾಂಚಜನ್ಯ, ನೇಸರ ಹಾಗೂ ಶುಭ ಗಿಡ ನೆಡುವುದರ ಮೂಲಕ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭವಾಯಿತು.
ಈ ಪ್ರಕ್ರಿಯೆಯಲ್ಲಿ ರಾಜೀವ್ ಎಂಜಿನೀಯರಿಂಗ್ ಕಾಲೇಜಿನ ಸುಮಾರು 30 ವಿದ್ಯಾರ್ಥಿಗಳು ಪಾಲ್ಗೊಂಡು ಗಿಡಗಳಗನ್ನು ನೆಟ್ಟರು.ಪುಟ್ಟಡವಿ ನಿರ್ಮಾಣ ಸಂಚಾಲಕ, ಮುಂಜಾನೆ ಮಿತ್ರರು ಅಧ್ಯಕ್ಷ ಸಿ.ಬಿ.ವೆಂಕಟೇಗೌಡ ಅರಣ್ಯೀಕರಣ ಪ್ರಕ್ರಿಯೆಗೆ ಚಾಲನೆ ನೀಡಿ, ‘ಹಾಸನ ನಗರ ಕಳೆದ ತಿಂಗಳು ದಾಖಲೆಯ 41 ಡಿಗ್ರಿ ಉಷ್ಣತೆಯನ್ನು ದಾಖಲಿಸಿತು. ಇಡೀ ತಿಂಗಳು ಹಾಸನ ನಗರದ ಜನತೆ ಬಿಸಿಗಾಳಿಯಿಂದ ತತ್ತರಿಸಿದರು. ನಗರವನ್ನು ತಂಪಾಗಿಡಲು ಅಗತ್ಯವಾದ ಮರಗಿಡಗಳು ಹಾಸನ ನಗರದಲ್ಲಿ ಇಲ್ಲ. ಇದ್ದ ಮರಗಿಡಗಳೆಲ್ಲಾ ಅವೈಜ್ಞಾನಿಕ ಅಭಿವೃದ್ಧಿ ಎಂಬ ಹೆಬ್ಬಾವಿಗೆ ಬಲಿಯಾಗಿವೆ. ಆ ಕಾರಣಕ್ಕೆ ಹಾಸನ ನಗರ ಬಿಸಿಲ ಬೇಗೆಯಿಂದ ತತ್ತರಿಸಿತು. ಹಾಸನ ನಗರದಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಪುಟ್ಟಡವಿ ನಿರ್ಮಾಣ ಕಾರ್ಯ ಪ್ರಾರಂಭಿಸುವ ಆಂದೋಲನವನ್ನು ಹಸಿರುಭೂಮಿ ಪ್ರತಿಷ್ಠಾನವು ವಿವಿಧ ಸಂಘ ಸಂಸ್ಥೆಗಳನ್ನು ಒಳಗೊಂಡು ಪ್ರಾರಂಭಿಸಿದೆ’ ಎಂದು ಹೇಳಿದರು.
ಹಸಿರುಭೂಮಿ ಪ್ರತಿಷ್ಠಾನದ ‘ಹಸಿರುಸಿರಿ’ ಸಂಚಾಲಕ ಪುರುಶೋತ್ತಮ ಗಿಡನೆಡುವ ಮಾದರಿ ವಿವರಿಸಿ ನಗರದ ನಡುವೆ ನಿರ್ಮಾಣವಾಗುವ ಕಾಡು ನಗರ ವಾಸಿಗಳಿಗೆ ಶುದ್ಧಗಾಳಿ ನೀಡಿ ನೆಮ್ಮದಿಯ ಜೀವನ ನೀಡುತ್ತದೆ ಎಂದರು.