ಶಾಸಕ ಡಿ.ರವಿಶಂಕರ್ ಕ್ಷೇತ್ರದ ಜನತೆಯ ಕ್ಷಮೆ ಕೇಳುವಂತೆ ಆಗ್ರಹ

KannadaprabhaNewsNetwork | Published : Jun 15, 2024 1:02 AM

ಸಾರಾಂಶ

ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಮಹದೇವನಾಯಕನ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಮೃತಪಟ್ಟಿದ್ದು, ಇದಕ್ಕೆ ಯಾರು ಹೊಣೆ, ಚೀರನಹಳ್ಳಿ ಗ್ರಾಮದ ಪುಂಡನಾದ ಕಾಮುಕ ಲೋಕೇಶ್ ಎಂಬಾತನ ಬೆದರಿಕೆಯಿಂದ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅದನ್ನು ಅವರು ನಿರ್ಲಕ್ಷಿಸಿದ ಪರಿಣಾಮ ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿರುವ ಪ್ರಕರಣದ ಹೊಣೆಯನ್ನು ಶಾಸಕರೇ ಹೊರಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದ್ದು, ಅದನ್ನು ಕಾಪಾಡುವಲ್ಲಿ ವಿಫಲರಾಗಿರುವ ಶಾಸಕ ಡಿ.ರವಿಶಂಕರ್ ಕ್ಷೇತ್ರದ ಜನತೆಯ ಕ್ಷಮೆ ಕೇಳಬೇಕು ಎಂದು ಜಿ.ಪಂ.ಮಾಜಿ ಸದಸ್ಯ ಎಂ.ಟಿ.ಕುಮಾರ್ ಆಗ್ರಹಿಸಿದರು.

ತಾಲೂಕಿನ ಚಂದಗಾಲು ಗ್ರಾಮದ ಮಹದೇವನಾಯಕನ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಮೃತಪಟ್ಟಿದ್ದು, ಇದಕ್ಕೆ ಯಾರು ಹೊಣೆ ಎಂದು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ಚೀರನಹಳ್ಳಿ ಗ್ರಾಮದ ಪುಂಡನಾದ ಕಾಮುಕ ಲೋಕೇಶ್ ಎಂಬಾತನ ಬೆದರಿಕೆಯಿಂದ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅದನ್ನು ಅವರು ನಿರ್ಲಕ್ಷಿಸಿದ ಪರಿಣಾಮ ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿರುವ ಪ್ರಕರಣದ ಹೊಣೆಯನ್ನು ಶಾಸಕರೆ ಹೊರಬೇಕೆಂದರು.

ಮಹದೇವನಾಯಕನ ಕುಟುಂಬದ ಆತ್ಮಹತ್ಯೆ ವಿಚಾರದಲ್ಲಿ ನಾನು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇನೆ ಎಂದು ಡಿ. ರವಿಶಂಕರ್ ತಿಳಿಸಿದ್ದಾರೆ, ಆದರೆ ಆ ದಿನ ಪ್ರಕರಣವನ್ನು ಮುಚ್ಚಿ ಹಾಕಲು ಕೆ.ಆರ್. ನಗರದ ಪ್ರವಾಸಿ ಮಂದಿರದಲ್ಲಿ ಪ್ರಯತ್ನಿಸಿದ್ದು, ಯಾರು ಎಂದು ಅವರು ಪ್ರಶ್ನಿಸಿದರು.

ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಅವಧಿಯಲ್ಲಿ ಕೆಲವು ಘಟನೆಗಳು ನಡೆದವು ಎಂದು ಶಾಸಕರು ಹೇಳಿದ್ದಾರೆ, ಆದರೆ ಆಗ ಯಾರೋ ಪರಸ್ಪರ ವೈಯಕ್ತಿಕ ವಿಚಾರಕ್ಕೆ ಹೊಡೆದಾಡಿಕೊಂಡಿದ್ದರು, ಆದರೆ ಚಂದಗಾಲು ಗ್ರಾಮದಲ್ಲಿ ನಡೆದಿರುವುದು ಮುಂಚಿತವಾಗಿ ಪೊಲೀಸರಿಗೆ ತಿಳಿದಿತ್ತು ಎಂದರು.

ಮಾಜಿ ಸಚಿವರು ಅಭಿವೃದ್ದಿ ವಿಚಾರದಲ್ಲಿ ನನ್ನ ಜತೆ ಕೈಜೋಡಿಸಲಿ ಎಂದು ಶಾಸಕರು ಕೇಳಿದ್ದಾರೆ, ಆದರೆ ವಾಸ್ತವವಾಗಿ ಇಲ್ಲಿ ಒಂದು ವರ್ಷದಿಂದ ಯಾವ ಕೆಲಸಗಳು ನಡೆಯುತ್ತಿವೆ ಎಂದು ವ್ಯಂಗ್ಯವಾಡಿದರು. ಮುಂದಾದರು ಡಿ. ರವಿಶಂಕರ್ ಅವರು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ಕ್ಷೇತ್ರದ ಜನತೆಗೆ ರಕ್ಷಣೆ ನೀಡಲಿ ಎಂದು ಸಲಹೆ ನೀಡಿದರು.

ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಮಹದೇವನಾಯಕನ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ತಿಸ್ಕರಿಸಿದ ಸಮಯದಲ್ಲಿ ಗಮನಿಸದ ಶಾಸಕರ ಕಣ್ಣು ಆ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದಾಗ ತೆರೆಯಿತೆ ಎಂದು ಟೀಕಿಸಿದರು.

ವಾಸ್ತವವಾಗಿ ಪ್ರಕರಣವನ್ನು ಮುಚ್ಚಿ ಹಾಕಲು ಶಾಸಕರು ವ್ಯವಸ್ಥಿತ ಹುನ್ನಾರ ನಡೆಸಿದ್ದರು, ಆದರೆ ಈ ವಿಚಾರದಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್ ಅವರು ಮಧ್ಯೆ ಪ್ರವೇಶ ಮಾಡಿದ ನಂತರ ನೊಂದ ಕುಟುಂಬಕ್ಕೆ ನ್ಯಾಯ ದೊರೆತು, ಪುಂಡನ ವಿರುದ್ದ ದೂರು ದಾಖಲಾಗಿ ತಪ್ಪಿತಸ್ಥ ಪೊಲೀಸರ ಅಮಾನತ್ತಾಗಿದೆ ಎಂದರು.

ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬದವರಿಗೆ ಪರಿಹಾರದ ಚೆಕ್ ನೀಡಲು ಸಾ.ರಾ. ಮಹೇಶ್ ಯಾರು ಎಂದು ಶಾಸಕರು ಪ್ರಶ್ನಿಸಿದ್ದಾರೆ, ಆದರೆ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರಿಂದ ಚೆಕ್ ಕೊಡಿಸಲಾಗಿದೆ ಇದಕ್ಕೆ ನಿಮ್ಮ ವೈಫಲ್ಯವು ಕಾರಣ ಎಂದು ಅರಿಯಬೇಕೆಂದರು.

ಮಾಜಿ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಮುಂದಾಗದ ನೀವು, ಅವರ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದು, ಇದಕ್ಕೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲು ಕಾದಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್ ಮಾತನಾಡಿ, ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ತಪ್ಪಿತಸ್ಥನ ವಿರುದ್ದ ದೂರು ದಾಖಲಾಗಿ ನೊಂದ ಕುಟುಂಬಕ್ಕೆ ನ್ಯಾಯ ದೊರೆತು ಪರಿಹಾರ ಸಿಗಲು ಮಾಜಿ ಸಚಿವ ಸಾ.ರಾ. ಮಹೇಶ್ ಕಾರಣರಾಗಿದ್ದು, ಅವರು ವಿರುದ್ದ ಮಾತನಾಡುವ ನೈತಿಕ ಹಕ್ಕು ಶಾಸಕರಿಗಿಲ್ಲ ಎಂದರು.

ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ ಕುಚೇಲ, ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಜೆಡಿಎಸ್ ಮುಖಂಡರಾದ ಎಚ್.ಪಿ. ಹರೀಶ್, ಪ್ರಸನ್ನಕುಮಾರ್, ನಾಗೇಶ್ ಇದ್ದರು.

Share this article