ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಪ್ರಯತ್ನಿಸುವೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨ ನೇ ಅಂತಸ್ತಿನಲ್ಲಿ ೨ ಕೋಟಿ ವೆಚ್ಚದಲ್ಲಿ ೭ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ಕಾಲೇಜಿನ ಕೊಠಡಿಗಳಿಗೆ ಕಳೆದ ಸರ್ಕಾರದಲ್ಲಿ ಅನುಮೋದನೆ ಮಂಜೂರಾಗಿತ್ತು. ಆದರೆ ಹಣ ನೀಡಿರಲಿಲ್ಲ. ಈಗ ಅನುದಾನ ಬಂದಿದೆ ಕಾಮಗಾರಿಗೆ ಚಾಲನೆ ಸಿಕ್ಕಿದೆ ಎಂದರು. ಕಾಲೇಜಿಗೆ ಅಗತ್ಯವಾಗಿ ಬೇಕಾದ ಸುತ್ತುಗೋಡೆ ಇಲ್ಲ. ಜಾಗ ದೊಡ್ಡದಿದೆ. ವಿಶೇಷ ಅನುದಾನದಲ್ಲಿ ಸುತ್ತು ಗೋಡೆ ನಿರ್ಮಿಸಲು ಪ್ರಯತ್ನಿಸುವೆ. ಅಲ್ಲದೆ ಶಾಸಕರ ಅನುದಾನದಲ್ಲಿ ಕಾಲೇಜಿನ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದರು.
ಕಾಲೇಜು ಮುಂದೆ (ಮೈಸೂರು-ಊಟಿ ಹೆದ್ದಾರಿ) ಸಾರಿಗೆ ಬಸ್ ನಿಲ್ಲದ ಕಾರಣ ವಿದ್ಯಾರ್ಥಿಗಳು ಕಾಲೇಜಿಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆಂಬ ಮನವಿಗೆ ಸ್ಪಂದಿಸಿ ಮಾತನಾಡಿ, ಸಾರಿಗೆ ಬಸ್ ಕಡ್ಡಾಯವಾಗಿ ನಿಲ್ಲಿಸಲು ಸೂಚನೆ ನೀಡುತ್ತೇನೆ ಎಂದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಒಳ್ಳೆ ಹೆಸರಿದ್ದು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಶ್ರಮ ಹಾಕಿದರೆ ನೂರಕ್ಕೆ ನೂರರಷ್ಟು ಫಲಿತಾಂಶ ಬರಬೇಕು. ಆ ನಿಟ್ಟಿನಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ತೊಡಗಿಕೊಳ್ಳಿ ಎಂದು ಸಲಹೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಾಲೂಕಿನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಾರಣ ಕಾಲೇಜಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಲು ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡುವೆ ಎಂದರು. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಭಾಗವಹಿಸಿದರೆ ಮಾನಸಿಕ, ದೈಹಿಕವಾಗಿ ಸದೃಢರಾಗುತ್ತೀರಾ ಎಂದರು.
ಪ್ರಾಂಶುಪಾಲ ರಮೇಶ್ ಮಾತನಾಡಿದರು. ಕಾಲೇಜು ಸಮಿತಿಯ ಕಾರ್ಯಾಧ್ಯಕ್ಷ ಬಿ.ಕುಮಾರಸ್ವಾಮಿ, ಜಿಲ್ಲಾಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಪುರಸಭೆ ಮಾಜಿ ಉಪಾಧ್ಯಕ್ಷ ಎಸ್‌ಆರ್‌ಎಸ್ ರಾಜಶೇಖರ್, ಕಾಲೇಜು ಸಮಿತಿ ಸದಸ್ಯರಾದ ಪಿ.ಸುರೇಂದ್ರ, ಪುಟ್ಟಸ್ವಾಮಿ ಆಚಾರ್, ಆರ್.ಮಧುಕುಮಾರ್, ಶಾಂತರಾಮ್, ಭಾಗ್ಯಮ್ಮ, ಜಿ.ಶಿವಕುಮಾರ್, ತಸ್ಲೀಮ್, ಮಲ್ಲು, ಸ್ವಾಮಿ, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಎನ್.ಕುಮಾರ್, ರಾಜಗೋಪಾಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.