ಜೆಡಿಎಸ್ ಬಲಪಡಿಸಲು ನಿಖಿಲ್ ನೇತೃತ್ವದಲ್ಲಿ ಶ್ರಮ: ಇಂಚರ ಗೋವಿಂದರಾಜು

KannadaprabhaNewsNetwork |  
Published : Jul 11, 2025, 12:32 AM IST
೧೦ಕೆಎಲ್‌ಆರ್-೧೬ಕೋಲಾರದ ಬೈರೇಗೌಡ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿರನ್ನು ಜೆಡಿಎಸ್ ಕಾರ್ಯಕರ್ತರು ಸನ್ಮಾನಿಸುತ್ತಿರುವುದು. ಎಂಎಲ್ಸಿ ಇಂಚರ ಗೋವಿಂದರಾಜು, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಇದ್ದರು. | Kannada Prabha

ಸಾರಾಂಶ

ಪಕ್ಷದ ಸಂಘಟನೆಗಾಗಿ ನಾನು ಧೈರ್ಯದಿಂದ ಮುನ್ನಡೆಯುತ್ತೇನೆ ಎಂಬ ಸಂಕಲ್ಪದೊಂದಿಗೆ ನಿಖಿಲ್ ಕುಮಾರಸ್ವಾಮಿ ಕೈಗೊಂಡಿರುವ ಪ್ರವಾಸ, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ,

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯವ್ಯಾಪಿ ಜೆಡಿಎಸ್ ಸದಸ್ಯತ್ವ ನೋಂದಣಿಗಾಗಿ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ 54 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಬಲ ನೀಡುತ್ತಿದ್ದಾರೆ ಎಂದು ಎಂಎಲ್ಸಿ ಇಂಚರ ಗೋವಿಂದರಾಜು ಹೇಳಿದರು.ನಗರದ ಬೈರೇಗೌಡ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಪಕ್ಷದ ಹಿರಿಯ ನಾಯಕ ಕುಮಾರಸ್ವಾಮಿ ಕೇಂದ್ರ ರಾಜಕಾರಣದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ರಾಜ್ಯ ಮಟ್ಟದ ಪಕ್ಷ ಸಂಘಟನೆಯ ದಿಕ್ಕಿನಲ್ಲಿ ನಿಖಿಲ್ ನೇತೃತ್ವ ವಹಿಸಿದ್ದು, ಪಕ್ಷಕ್ಕೆ ಹೊಸ ಶಕ್ತಿ ತುಂಬಲು ನೆರವಾಗುತ್ತಿದೆ ಎಂದು ಹೇಳಿದರು.ಪಕ್ಷದ ಸಂಘಟನೆಗಾಗಿ ನಾನು ಧೈರ್ಯದಿಂದ ಮುನ್ನಡೆಯುತ್ತೇನೆ ಎಂಬ ಸಂಕಲ್ಪದೊಂದಿಗೆ ನಿಖಿಲ್ ಕುಮಾರಸ್ವಾಮಿ ಕೈಗೊಂಡಿರುವ ಪ್ರವಾಸ, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ, ಹಳೆಯ ಮೈಸೂರು ಭಾಗ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಪ್ರವಾಸ ನಡೆಸಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್‌ಗೆ ನೂತನ ಚೈತನ್ಯ ನೀಡುತ್ತಿದ್ದಾರೆ ಎಂದು ಹೇಳಿದರು.ಸದಸ್ಯತ್ವ ಅಭಿಯಾನದಲ್ಲಿ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಫೋನ್ ಮೂಲಕ ಮಿಸ್‌ಕಾಲ್ ನೀಡಿ ಜೆಡಿಎಸ್ ಸದಸ್ಯರಾಗಬಹುದು. ಎಲ್ಲರೂ ಪಕ್ಷದ ಸಕ್ರಿಯ ಕಾರ್ಯಕರ್ತರಾಗಲು ಮುಂದಾಗಬೇಕು ಕರೆನೀಡಿದರು.ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವಾಗಿ ನೆಲೆಯೂರಿದ್ದು, ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬುದು ಮಾಜಿ ಪ್ರಧಾನಿ ದೇವೇಗೌಡರ ಕನಸು, ಈ ಕನಸು ನನಸಾಗಿಸಲು ಮಾಜಿ ಸಿಎಂ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ನಿಖಿಲ್ ಕುಮಾರಸ್ವಾಮಿ ವಹಿಸಿಕೊಂಡಿದ್ದಾರೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟು, ರೈತರು, ಮಹಿಳೆಯರು ಹಾಗೂ ಯುವಕರು ಅನೇಕ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಈ ಹಿಂದೆ ನಡೆದ ಚುನಾವಣೆಯಲಲಿ ಬೆಂಬಲ ನೀಡಿದ ಸಮುದಾಯಗಳೇ ಇಂದು ಪಶ್ಚಾತಾಪ ಪಡುತ್ತಿದ್ದಾರೆ, ಅವರಿಗೆ ಮತ ಹಾಕಿ ತಪ್ಪು ಮಾಡಿದ್ದೇವೆ ಎನ್ನುತ್ತಿದ್ದರೆ ಎಂದು ಬೇಸರಿಸಿದರು.ಮುಂಬರುವ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ರೈತ ಸ್ನೇಹಿ ಆಡಳಿತ ಸ್ಥಾಪಿಸಬೇಕಾಗಿದೆ, ಜೆಡಿಎಸ್ ಪಕ್ಷದ ಪ್ರಣಾಳಿಕೆ ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದರೆ ರಾಜ್ಯದಲ್ಲಿ ಸಮೃದ್ಧಿ ಸ್ಥಾಪನೆಯಾಗಿ ಜರನು ನೆಮ್ಮದಿಯಿಂದ ಇರುತ್ತಾರೆ ಎಂದರು.ಕಾಂಗ್ರೆಸ್ ಸರ್ಕಾರದ ಬಿಟ್ಟಿ ಭಾಗ್ಯಗಳಿಂದಾಗಿ ರಾಜ್ಯ ಬಜೆಟ್ ದಿವಾಳಿಯತ್ತ ಸಾಗಿದೆ, ಸರ್ಕಾರಿ ನೌಕರರು ವೇತನವಿಲ್ಲದೆ ಕಷ್ಟಪಡುತ್ತಿದ್ದಾರೆ. ಜನರು ಬಹಳಷ್ಟು ಅಸಹನೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆಗೂ ಅದಕ್ಕೂ ಮುನ್ನ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಆಡಳಿತಕ್ಕೆ ಬರಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ಪಕ್ಷ ಸೋಲಿನ ಭೀತಿಯಿಂದ ಚುನಾವಣೆಗಳನ್ನು ಮುಂದೂಡುತ್ತಿದೆ, ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

PREV