ಪಾಳು ಬಿದ್ದಿದೆ ಪೇರಡ್ಕ ಸಮುದಾಯ ಭವನ: ಲೋಕಾಯುಕ್ತರಿಗೆ ದೂರು

KannadaprabhaNewsNetwork |  
Published : Jul 11, 2025, 12:32 AM IST
ಪೇರಡ್ಕದ ಸಮುದಾಯ ಭವನ ಪಾಳು ಬಿದ್ದ ಸ್ಥಿತಿ | Kannada Prabha

ಸಾರಾಂಶ

ಕಾರ್ಕಳ ತಾಲೂಕು ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರಡ್ಕದಲ್ಲಿ ನಿರ್ಮಾಣಗೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯ ಭವನ ವರ್ಷಗಳಿಂದ ಬಳಕೆಯಾಗದೆ ಪಾಳು ಬಿದ್ದ ಸ್ಥಿತಿಗೆ ತಲುಪಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಸರ್ಕಾರದ ಯೋಜನೆಗಳು ಪಾಳು ಬಿದ್ದು ಅನುದಾನ ವ್ಯರ್ಥವಾಗುತ್ತಿರುವುದಕ್ಕೆ ಇನ್ನೊಂದು ಉದಾಹರಣೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ಎಂಬಲ್ಲಿ ಕಂಡುಬಂದಿದೆ. ಕಾರ್ಕಳ ತಾಲೂಕು ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರಡ್ಕದಲ್ಲಿ ನಿರ್ಮಾಣಗೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯ ಭವನ ವರ್ಷಗಳಿಂದ ಬಳಕೆಯಾಗದೆ ಪಾಳು ಬಿದ್ದ ಸ್ಥಿತಿಗೆ ತಲುಪಿದೆ.

ವರ್ಷಗಳ ಹಿಂದೆ ಪೂರ್ಣಗೊಂಡಿರುವ ಈ ಕಟ್ಟಡ ಇಂದು ನಿರ್ಲಕ್ಷಿತ ಭವನವಾಗಿ ನಿಂತಿದೆ.

2013-14ರ ಧಾರ್ಮಿಕ ದತ್ತಿ ಇಲಾಖೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯ ಅಡಿಯಲ್ಲಿ ₹ 9.50 ಲಕ್ಷ ಅನುದಾನದಲ್ಲಿ ನಿರ್ಮಿತ ಈ ಸಮುದಾಯ ಭವನ, ಉದೇಶಿತ ಸಮುದಾಯದ ಉಪಯೋಗಕ್ಕೆ ಕಟ್ಟಲ್ಪಟ್ಟಿದ್ದರೂ, ಇಂದಿಗೂ ಬೀಗ ಹಾಕಿ ಬಿಟ್ಟಿರುವ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಪಾಚಿ ಹಬ್ಬಿರುವ ಭವನದಲ್ಲಿ ಈಗ ದನ, ಕರು, ನಾಯಿಗಳು ಆಶ್ರಯ ಪಡೆಯುವಂತಾಗಿದೆ.

ಸ್ಥಳೀಯರ ಆಕ್ರೋಶ: ಉಪಯೋಗಕ್ಕೆ ಬಾರದ ಈ ಸಂಕೀರ್ಣ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು, ಶೈಕ್ಷಣಿಕ, ಧಾರ್ಮಿಕ, ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಪೂರಕವಾಗಿರಬೇಕಾಗಿತ್ತು. ಆದರೆ ಇದರ ಬಳಕೆ ಶೂನ್ಯವಾಗಿರುವುದರಿಂದ, ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಿದ ಭವನ ಬಳಕೆಯಾಗದೆ ಇರುವುದನ್ನು ಸಾರ್ವಜನಿಕರು ವಿಫಲ ಯೋಜನೆಯೆಂದು ವೀಕ್ಷಿಸುತ್ತಿದ್ದಾರೆ.

ದಶಕ ಕಳೆದರು ಹಸ್ತಾಂತರ ವಿಳಂಬ:

ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದು ಭವನದ ದುರವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಟ್ಟಡವು ನಿರ್ಮಾಣಗೊಂಡು ಪಂಚಾಯಿತಿಗೆ ಹಸ್ತಾಂತರವಾಗದೇ ಉಳಿದಿರುವುದರಿಂದ, ಯಾವುದೇ ರೀತಿಯ ಕಾರ್ಯಕ್ರಮಗಳ ಆಯೋಜನೆ ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಈ ಭವನದ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ನೀಡದಿರುವುದೇ ವಿಳಂಬಕ್ಕೆ ಕಾರಣ.

ಅಧಿಕಾರಿಗಳಿಗೆ ಪತ್ರ, ಲೋಕಾಯುಕ್ತ ದೂರು: ಈ ಭವನದ ಮೂಲ ದಾಖಲೆಗಳು ಸ್ಪಷ್ಟವಾಗದಿರುವ ಹಿನ್ನೆಲೆಯಲ್ಲಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಪತ್ರ ಬರೆದು ಪರಿಶೀಲನೆ ನಡೆಸುವಂತೆ ವಿನಂತಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಆರತಿ ಅಶೋಕ್ ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಭವನವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಒತ್ತಾಯಿಸಿದ್ದಾರೆ........................

ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟನೆ ಸಮುದಾಯ ಭವನ ಹಸ್ತಾಂತರಿಸಿ ಸ್ಥಳೀಯರಿಗೆ ಉಪಯೋಗವಾಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಕ್ರಮ ಆರಂಭಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ನಾಯ್ಕ್ ಸ್ಪಷ್ಟಪಡಿಸಿದ್ದಾರೆ. ‘ಶೀಘ್ರದಲ್ಲಿ ಭವನದ ದಾಖಲೆಗಳ ಸಮೀಕ್ಷೆ ಮಾಡಿ, ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ