ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಹಾಲು ಒಕ್ಕೂಟದ ಸಹಕಾರ ಸಂಘಗಳ ನಿಯಮಿತದಿಂದ (ಮೈಮುಲ್) ಕ್ಯೂಆರ್ ಕೋಡ್ ಒಳಗೊಂಡ ನಂದಿನಿ ತುಪ್ಪದ ನೂತನ ಪ್ಯಾಕೆಟ್ ಗಳನ್ನು ಕರ್ನಾಟಕ ಹಾಲು ಉತ್ಪಾದಕಗಳ ಮಹಾಮಂಡಳ ಒಕ್ಕೂಟದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಗುರುವಾರ ಬಿಡುಗಡೆಗೊಳಿಸಿದರು.ನಗರದ ಆಲನಹಳ್ಳಿಯ ಮೈಮುಲ್ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಪ್ಯಾಕೆಟ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನೂತನ ಪ್ಯಾಕೆಟ್ ಹಾಲೋ ಗ್ರಾಮ್ ಪ್ರಿಂಟೆಡ್ ಆಗಿದ್ದು, ಪ್ಯಾಕೆಟ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ತುಪ್ಪದ ಸಂಪೂರ್ಣ ಮಾಹಿತಿ ಸಿಗಲಿದೆ. ಪ್ಯಾಕೆಟ್ ಬ್ಯಾಚ್ ನಂಬರ್, ಅದನ್ನು ತಯಾರಿಸಿದ ದಿನಾಂಕ, ಯಾವ ದಿನಾಂಕದವರೆಗೆ ಬಳಸಬಹುದು ಹಾಗೂ ಯಾವುದೇ ದೂರುಗಳನ್ನು ಸಹ ದಾಖಲಿಸಬಹುದಾಗಿದೆ ಎಂದರು.
500 ಗ್ರಾಂ ಮತ್ತು 1 ಲೀಟರ್ ಪ್ಯಾಕೆಟ್ ಅನ್ನೂ ನವೀಕರಿಸಿ ಬಿಡುಗಡೆ ಮಾಡಿದ್ದು, ತುಪ್ಪದಲ್ಲಿಯಾಗಲಿ ಅಥವಾ ದರದಲ್ಲಿಯಾಗಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಂದಿನoತೆ ಅದೇ ಸ್ವಾದದ ಪೌಷ್ಠಿಕಯುಕ್ತ ತುಪ್ಪ ಗ್ರಾಹಕರು ಸವಿಯಬಹುದಾಗಿದೆ ಎಂದರು.ತಿರುಪತಿ, ಹೊರ ದೇಶಗಳಿಗೂ ತುಪ್ಪ ಪೂರೈಕೆ:
ರಾಜ್ಯದಿಂದ 2 ಸಾವಿರ ಮೆಟ್ರಿಕ್ ಟನ್ ತುಪ್ಪವನ್ನು ತಿರುಪತಿಯ ಟಿಟಿಡಿಗೆ ಪೂರೈಸಲಾಗಿದೆ. ಇನ್ನೂ 1500 ಬೇಡಿಕೆಯಿದ್ದು, ಅದನ್ನು ಪೂರೈಸಲಾಗುತ್ತಿದೆ. ಒಟ್ಟಾರೆ 2500 ಟನ್ ತುಪ್ಪ ಬೇಡಿಕೆಗೆ ಅನುಸಾರವಾಗಿ ರವಾನೆ ಮಾಡಿದ್ದೇವೆ. ತಿರುಪತಿಯ ಲಡ್ಡು ಪರಿಶುದ್ಧತೆ ಹಾಗೂ ರುಚಿಗೆ ನಂದಿನಿ ತುಪ್ಪವೇ ಕಾರಣ ಎಂದರು.ದುಬೈ, ಸೌದಿ ಅರೆಬೀಯಾಗಳಲ್ಲಿ ಈಗಾಗಲೇ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೂ ಪೂರೈಕೆ ಮಾಡಲಾಗುವುದು. ಆಗಸ್ಟ್ ವೇಳೆಗೆ ಅಲ್ಲಿ ನಡೆಯುವ ಫೆಫ್ಸ್ಟ್ ಗೆ 3 ಸಾವಿರ ಟನ್ ಬೇಡಿಕೆ ಬಂದಿದ್ದು, ಅದನ್ನು ಪೂರೈಸಲಾಗುವುದು. ಅದರಂತೆ ದೇಶದ ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿಯೂ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಈಗಾಗಲೇ ಮಹದೇಶ್ವರ ಬೆಟ್ಟ, ಚಾಮುಂಡಿಬೆಟ್ಟಕ್ಕೂ ಬೇಡಿಕೆಗೆ ಅನುಗುಣವಾಗಿ ತುಪ್ಪಾ ನೀಡುತ್ತಿದ್ದೇವೆ. ಸರ್ಕಾರ ಮುಜರಾಯಿ ಇಲಾಖೆಗೆ ಒಳಪಡುವ ಎ, ಬಿ ಗ್ರೇಡ್ ದೇವಾಲಯಗಳಲ್ಲಿ ದಾಸೋಹ, ಪ್ರಸಾದಗಳಿಗೆ ನಂದಿನಿ ತುಪ್ಪವನ್ನೇ ಬಳಸಬೇಕೆಂಬ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಯಾವೆಲ್ಲಾ ದೇವಾಲಯ ಬೇಡಿಕೆ ಸಲ್ಲಿಸಿದರೂ ಅದನ್ನು ಪೂರೈಸುವ ಕೆಲಸ ಮಾಡಲಾಗುವುದು. ಸದ್ಯ ನಮ್ಮಲ್ಲಿ 3 ಸಾವಿರ ಮೆಟ್ರಿಕ್ ಟನ್ ತುಪ್ಪ ತಯಾರು ಮಾಡುತ್ತಿದೆ. ಅಷ್ಟು ಸಹ ಮಾರಾಟ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದರು.1.50 ಕೋಟಿ ಲೀಟರ್ ಹಾಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದು, 50 ಲಕ್ಷ ಲೀಟರ್ ನೇರ ಮಾರಾಟವಾಗುತ್ತಿದ್ದು, 8 ಲಕ್ಷ ಲೀಟರ್ ಕ್ಷೀರ ಭಾಗ್ಯದಿಂದ 24 ಲಕ್ಷ ಲೀಟರ್ ಹಾಲನ್ನು ಪೌಂಡರ್ ಆಗಿ ಪರಿವರ್ತಿಸಿ ಅದರ ಕಬ್ಬಿಣದ ಅಂಶವನ್ನು ತುಪ್ಪವಾಗಿ ಬಳಸಿಕೊಳ್ಳುತ್ತಿದ್ದೇವೆ. ಜೊತೆಗೆ ಹಾಲಿನ ಪೌಂಡರನ್ನು ಸಹ ಮಾರಾಟ ಮಾಡುವ ಮೂಲಕ ಸೂಕ್ತ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ ಎಂದರು.
ಎಲ್ಲಾ ಕಡೆಗಳಲ್ಲಿಯೂ ಸಮೃದ್ಧಿ ಹಾಲು ಲಭ್ಯವಿದೆ. ಹೆಚ್ಚಿನ ಬೇಡಿಕೆಯಿದೆ. ಅದನ್ನು ಪೂರೈಸುವ ಕೆಲಸ ಆಗುತ್ತಿದೆ. ಫ್ಯಾಟ್ ಒಳಗೊಂಡು ಹೆಚ್ಚಾಗಿ ಸಿಹಿ ತಿಂಡಿ ಬಳಕೆಯಲ್ಲಿ ಸಮೃದ್ಧಿ ಹಾಲು ಬಳಕೆ ಮಾಡಲಾಗುತ್ತಿದ್ದು, ಅದನ್ನು ನಿರಂತರ ಬೇಡಿಕೆಗೆ ಅನುಗುಣವಾಗಿ ವಿತರಿಸಲಾಗುತ್ತಿದೆ ಎಂದರು.ಇನ್ನೂ ಮಾಲ್ ಸೇರಿ ಇನ್ನಿತರ ಖಾಸಗಿ ಕಡೆಗಳಲ್ಲಿ ನಿಗಧಿತ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ನಮಗೆ ಯಾವುದೇ ನಷ್ಟವಿಲ್ಲ. ಸಂಬಂಧಿಸಿದ ಕಂಪನಿ ನಮ್ಮಲ್ಲಿ ನೇರವಾಗಿ ಕೊಂಡು ಅವರಿಗೆ ನಾವು ನೀಡಿರುವ ಮಾರ್ಜಿನ್ ಅನ್ನು ಅವರು ಗ್ರಾಹಕರಿಗೆ ನೀಡಿ ನಮ್ಮ ಉತ್ಪನ್ನವಾದ ನಂದಿನಿ ತುಪ್ಪವನ್ನು ಹೆಚ್ಚು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಂಸ್ಥೆಗೆ ಲಾಭ ಎಂದು ಅವರು ಸ್ಪಷ್ಟಪಡಿಸಿದರು.
ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್, ಕೆಎಂಎಫ್ ನಿರ್ದೇಶಕರು, ರಾಜ್ಯದ ಎಲ್ಲಾ ಜಿಲ್ಲೆಗಳ ಹಾಲು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರು, ಮೈಮುಲ್ ಅಧಿಕಾರಿಗಳು ಇದ್ದರು.