ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ಗುಡಿಬಂಡೆ
ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಅವರ ಕುಟುಂಬ ಸದಸ್ಯರು ಹೊಂದಿರುವ ವಿದೇಶಿ ಆಸ್ತಿಗಳಿಗೆ ಸಂಬಂಧಿಸಿದಂತೆ ಇಡಿ ದಾಳಿ ನಡೆದಿದೆ.ಉದ್ಯಮಿಯೂ ಆಗಿರುವ ಸುಬ್ಬಾರೆಡ್ಡಿ ದೇಶ, ವಿದೇಶಗಳಲ್ಲಿ ಆಸ್ತಿ ಮತ್ತು ಬ್ಯಾಂಕ್ ಖಾತೆಗಳು, ವ್ಯವಹಾರದಲ್ಲಿ ಹೂಡಿಕೆ ಹಾಗೂ ಮಲೇಶಿಯಾ, ಹಾಂಗ್‌ಕಾಂಗ್, ಜರ್ಮನಿಯಲ್ಲಿ ಆಸ್ತಿಪಾಸ್ತಿ ಹೊಂದಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಿಸಿನೆಸ್ ಪಾಲುದಾರರ ಮೇಲೆಯೂ ಇಡಿ ದಾಳಿ ನಡೆದಿದೆ.
ಫಾರಿನ್ ಎಕ್ಸ್‌ಚೇಂಜ್ ಮ್ಯಾನೇಜೆಂಟ್ ಆ್ಯಕ್ಟ್ (ಫೇಮಾ) ಸೆಕ್ಷನ್ 37 ಉಲಂಘನೆ ಹಿನ್ನೆಲೆ ಬೆಂಗಳೂರಿನ ಮಾರತ್ತಹಳ್ಳಿಯ ನಿವಾಸ, ಕಚೇರಿ ಸೇರಿದಂತೆ ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ, ವಿದೇಶಿ ವಿನಿಮಯ ನಿರ್ವಹಣೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಹ್ಯಾಟ್ರಿಕ್ ಶಾಸಕರಾಗಿದ್ದಾರೆ. ಅವರು ಮಲೇಷಿಯಾ, ಹಾಂಗ್ ಕಾಂಗ್ ಮತ್ತು ಜರ್ಮನಿಯಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ, ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುವ ಆರೋಪವೂ ಅವರ ಮೇಲಿದೆ. ಅಕ್ರಮವಾಗಿ ವಾಹನಗಳ ಖರೀದಿ, ಹಣ ಹೂಡಿಕೆ ಸೇರಿದಂತೆ ವಿವಿಧ ಆರೋಪಗಳ ಅಡಿ ಇಡಿ ಅಧಿಕಾರಿಗಳು ಈ ಪರಿಶೀಲನೆ ನಡೆಸುತ್ತಿದ್ದಾರೆ.
ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಮೇಲೆ ಇಡಿ ದಾಳಿಯನ್ನು ಖಂಡಿಸಿ, ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಇದೇ ಸಮಯದಲ್ಲಿ ಕೇಂದ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಇಡಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಈ ದಾಳಿಯನ್ನು ನಿಲ್ಲಿಸದೇ ಇದ್ದರೇ ರಾಜ್ಯವ್ಯಾಪಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಚುನಾವಣೆ ಮೂಲಕ ಗೆಲ್ಲಲೂ ಆಗದೇ ನಮ್ಮ ರಾಜ್ಯದ ಶಾಸಕರ ಹಾಗೂ ಸಂಸದರ ಮನೆಗಳ ಮನೆ ಐಟಿ ಹಾಗೂ ಇಡಿ ದಾಳಿಗಳನ್ನು ಮಾಡಿಸಿ ಅವರ ಶಕ್ತಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ 224 ಶಾಸಕರ ಪೈಕಿ, ಹೆಚ್ಚು ಅಭಿವೃದ್ಧಿ ಕೆಲಸ ಮಾಡಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಶಾಸಕರ ಮನೆ ಮೇಲೆ ಕಿಡಿಗೇಡಿಗಳು ಅವರನ್ನು ನೇರವಾಗಿ ಎದುರಿಸಲು ಶಕ್ತಿಯಿಲ್ಲದೇ ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ. ಅವರು ಯಾವುದೇ ಆಕ್ರಮ ಆಸ್ತಿಗಳನ್ನು ಹೊಂದಿಲ್ಲ, ಅವರು ಏನೇ ಮಾಡಿದರು ಕಾನೂನು ವ್ಯಾಪ್ತಿಯಲ್ಲಿ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ನಿಮಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿರೆಡ್ಡಿ, ಮುಖಂಡರಾದ ಲಕ್ಷ್ಮೀನಾರಾಯಣ, ರಮೇಶ್, ಕೃಷ್ಣೇಗೌಡ ಮತ್ತಿತರರು ಇದ್ದರು.ಜೋಳದ ಕಿಟ್ಟಿ ಮೇಲೆ ಐಟಿ ದಾಳಿ:ಇದೇ ರೀತಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡ ಹಾಗೂ ಜೋಳದ ವ್ಯಾಪಾರಿ ಜೋಳದ ಕಿಟ್ಟಿ( ಕೃಷ್ಣಮೂರ್ತಿ)ಯ ಪೇರೆಸಂದ್ರ ಗ್ರಾಮದ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸಿಕೆಬಿ-2 ಶಾಸಕ ಎಸ್.ಎನ್.ಸುಬ್ಬಾರೆಡ್ಡಿ