ಧಾರವಾಡ: ಗ್ರಾಹಕರೊಬ್ಬರಿಗೆ ಮೋಸ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಲೈಫ್ ಸ್ಟೈಲ್ ಹಾಲಿಡೇಸ್ ಕಂಪನಿಗೆ ದಂಡ ವಿಧಿಸಿ ಮತ್ತು ಪರಿಹಾರ ಕೊಡಲು ಗ್ರಾಹಕರ ಆಯೋಗ ಆದೇಶಿಸಿದೆ.
ಲೈಫ್ ಸ್ಟೈಲ್ ಹಾಲಿಡೇಸ್ ಕಂಪನಿಯು ಪ್ರವಾಸ ಮತ್ತು ಹೊಟೇಲ್ ವಾಸ್ತವ್ಯದ ಸೇವೆಗಳನ್ನು ದೇಶ ಮತ್ತು ವಿದೇಶಗಳಲ್ಲಿ ಹೊಂದಿದೆ. ಈ ಕಂಪನಿ ನೀಡಿದ ಜಾಹೀರಾತುಗಳು ಮತ್ತು ಅವರು ಕೊಟ್ಟಂತಹ ಭರವಸೆಗಳನ್ನು ನಂಬಿ ಹುಬ್ಬಳ್ಳಿಯ ಅನುಸೂಯಮ್ಮ ಎಂಬುವರು ₹1.35 ಲಕ್ಷಗಳ ಪೈಕಿ ₹80 ಸಾವಿರ ಪಾವತಿಸಿ ಸದಸ್ಯತ್ವ ಪಡೆದಿದ್ದರು. ಮೇ 2024 ರಲ್ಲಿ ಅನುಸೂಯಮ್ಮ ತಮ್ಮ ಆರು ಜನ ಕುಟುಂಬದ ಸದಸ್ಯರೊಂದಿಗೆ ಕೇರಳದ ಅಲ್ಲಾಪುಝಾ ಹೋದಾಗ ಕಂಪನಿ ಮೂಲಕ ಬೋಟ್ ಹೌಸ್ ಬುಕ್ ಮಾಡಿದ್ದರು. ಆದರೆ, ಅಲ್ಲಿ ಹಣದ ವಿಚಾರವಾಗಿ ಅನಸೂಯಮ್ಮನವರಿಗೆ ಬೇಸರ ಉಂಟಾಗಿತ್ತು.ಪ್ರವಾಸದಿಂದ ಮರಳಿದ ನಂತರ ತಮ್ಮ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಹಾಗೂ ತಾವು ಪಾವತಿಸಿದ ₹ 80 ಸಾವಿರ ಮರಳಿಸುವಂತೆ ಕೇಳಿದ್ದರು. ಎದುರುದಾರ ಕಂಪನಿ ಸಹ ಒಪ್ಪಿ ಮುಂದಿನ ದಿನಗಳಲ್ಲಿ ಮರಳಿಸುವಂತೆ ಹೇಳಿತ್ತು. ಆದರೆ, ಮರಳಿಸಿಲ್ಲ. ಇದನ್ನು ಪ್ರಶ್ನಿಸಿ ಅನುಸೂಯಮ್ಮ ಪ್ರಕರಣ ದಾಖಲಿಸಿದ್ದರು.
ಸದರಿ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಎದುರಾದರ ಕಂಪನಿಯು ಗ್ರಾಹಕರಿಗೆ ಸೇವಾ ನ್ಯೂನ್ಯತೆ ಮಾಡಿರುವುದು ದಾಖಲೆಯಿಂದ ತಿಳಿದುಬಂದಿದೆ. ಜತೆಗೆ ತಮ್ಮ ಸದಸ್ಯತ್ವ ರದ್ದುಗೊಳಿಸುವಂತೆ ಕೇಳಿದರೂ ಇವತ್ತಿನ ವರೆಗೆ ಸದಸ್ಯತ್ವದ ಹಣವನ್ನು ಮರಳಿ ಕೊಡದೇ ಸತಾಯಿಸಿದ್ದು ತಪ್ಪು ಎಂದು ಆಯೋಗ ತೀರ್ಪು ನೀಡಿದೆ. ಪಾವತಿಸಿದ ಹಣ ₹80 ಸಾವಿರಗಳನ್ನು ಬಡ್ಡಿ ಲೆಕ್ಕ ಹಾಕಿ ಮತ್ತು ಅವರಿಗೆ ಆದಂತಹ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕೆ ₹50 ಸಾವಿರ ಪರಿಹಾರ ಹಾಗೂ ಪ್ರಕರಣದ ಖರ್ಚು ₹10 ಸಾವಿರ ಕೊಡುವಂತೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.