ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದು ಖಚಿತ:ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Jul 11, 2025, 12:32 AM IST
10ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಎರಡೂವರೆ ವರ್ಷಗಳಿಂದ ಸರ್ಕಾರ ಜನರಿಗೆ ಅನುಕೂಲವಾಗುವಂತ ಯಾವುದೇ ಯೋಜನೆಗಳನ್ನು ಜಾರಿಮಾಡಿಲ್ಲ. ಅಭಿವೃದ್ಧಿ ಎಂಬುದು ಬರೀ ಕಾಗದದಲ್ಲಿ ಮಾತ್ರ ಕಾಣಬಹುದು. ಎಲ್ಲಾ ಕ್ಷೇತ್ರದಲ್ಲಿಯೂ ಶೂನ್ಯವಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಭ್ರಷ್ಟ ಸರ್ಕಾರವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಜಿಪಂ, ತಾಪಂ ಚುನಾವಣೆ ನಡೆಸುವಂತೆ ಕೋರ್ಟ್ ಛೀಮಾರಿ ಹಾಕಿದ್ದರೂ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆ ನಡೆಸಲು ಧಮ್ಮು, ತಾಕತ್ತು ಇಲ್ಲ. ಚುನಾವಣೆ ನಡೆಸಿದರೆ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವರು ಎಂಬ ಭೀತಿಯಿಂದ ಕಾಲಹರಣ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.ಪಟ್ಟಣದ ಆರ್.ಆರ್. ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶ ಹಾಗೂ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ಧಮ್ಮು ತಾಕತ್ತು ಬಗ್ಗೆ ಮಾತನಾಡುವರು. ಆದರೆ ಅವರ ಎರಡೂವರೆ ವರ್ಷಗಳ ಕಾಲ ಕಳಪೆ ಆಡಳಿತದಿಂದ ಜನರ ವಿಶ್ವಾಸ ಕಳೆದುಕೊಂಡಿರುವುದರಿಂದ ಚುನಾವಣೆ ಎದುರಿಸಲು ಧಮ್ಮು ತಾಕತ್ತನ್ನು ಕಳೆದುಕೊಂಡಿದ್ದಾರೆ ಎಂದರು.

ಎರಡೂವರೆ ವರ್ಷಗಳಿಂದ ಸರ್ಕಾರ ಜನರಿಗೆ ಅನುಕೂಲವಾಗುವಂತ ಯಾವುದೇ ಯೋಜನೆಗಳನ್ನು ಜಾರಿಮಾಡಿಲ್ಲ. ಅಭಿವೃದ್ಧಿ ಎಂಬುದು ಬರೀ ಕಾಗದದಲ್ಲಿ ಮಾತ್ರ ಕಾಣಬಹುದು. ಎಲ್ಲಾ ಕ್ಷೇತ್ರದಲ್ಲಿಯೂ ಶೂನ್ಯವಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಭ್ರಷ್ಟ ಸರ್ಕಾರವಾಗಿದೆ ಎಂದರು.ಪ್ರತಿ ದಿನ ರಾಜ್ಯದಲ್ಲಿ ಮೋಸ, ದಬ್ಬಾಳಿಕೆ ಮಾತ್ರ ನಡೆಯುತ್ತಿದೆ. ಸುಳ್ಳಿನ ಕಂತೆಯಲ್ಲಿ ರಚನೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ರಾಜ್ಯದ ಜನತೆಗೆ ತಲುಪಿದೆ ಎಂದು ಕಾಂಗ್ರೆಸ್ ನಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಯಾವುದಾದರೂ ಸರ್ಕಾರವಿದೆ ಎಂದರೆ ಅದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಸರ್ಕಾರವನ್ನು ಬದಲಾಯಿಸಲು ಮುಂದಾಗಿದ್ದಾರೆ.

ಹಿಂದೆ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಜ್ಯಕ್ಕೆ ಹಾಗೂ ತಾಲೂಕಿಗೆ ನೀಡಿರುವ ಕೊಡುಗೆಗಳನ್ನು ಜನರು ಇಂದೂ ಮರೆತಿಲ್ಲ. ಮತ್ತೆ ಸಮೃದ್ಧಿ ಸರ್ಕಾರವನ್ನು ಕಾಣಬೇಕಾದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೇಬೇಕು. 2028ಕ್ಕೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದು ಖಚಿತ. ಆದ್ದರಿಂದ ಪಕ್ಷದ ಕಾರ್ಯಕರ್ತರು ಸ್ಥಳಿಯ ಸಂಸ್ಥೆಯ ಚುನಾವಣೆಗೆ ಸಿದ್ಧರಾಗಿ ಅಲ್ಲಿ ನಿಮ್ಮ ಸಾಧನೆ ತೋರಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಅದರ ಪರಿಣಾಮ ಬೀರಲಿದೆ ಎಂದು ಬೇರು ಮಟ್ಟದಿಂದ ಪಕ್ಷ ಬಲವರ್ಧೆನೆಗೆ ಸೂಚಿಸಿದರು.ಸಂಸದ ಎಂ.ಮಲ್ಲೇಶಬಾಬು ಮಾತನಾಡಿ, ಸಂಸದನಾಗಿ ವರ್ಷವಾಗಿದೆ, ವರ್ಷದಲ್ಲಿ ನಾನು ಸುಮ್ಮನೆ ದೆಹಲಿಯಲ್ಲಿ ಕೂರಲಿಲ್ಲ. ಸಚಿವರ ಬಳಿ ಚರ್ಚಿಸಿ ಜಿಲ್ಲೆಗೆ ಬೇಕಾಗಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದರಂತೆ ಪಟ್ಟಣದಲ್ಲಿ ಹಲವು ದಶಕಗಳಿಂದ ಕನಸಾಗಿದ್ದ ರೈಲ್ವೆ ಮೇಲ್ಸೇತುವೆಗಳನ್ನು ಮಂಜೂರು ಮಾಡಿಸಿಕೊಂಡು ಬರಲಾಗಿದೆ. ಕೋಲಾರ ಚೆನ್ನೈ ಹೈವೇ ರಸ್ತೆಯನ್ನು 4 ಪಥದಿಂದ 6 ಪಥ ರಸ್ತೆಯಾಗಿ ಮಾಡಲಾಗಿದೆ. ಇನ್ನೂ 4 ವರ್ಷ ಇರುವುದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹೋರಾಡುವೆ ಎಂದು ಭರವಸೆ ನೀಡಿದರು.ಈ ವೇಳೆ ಶಾಸಕ ವೆಂಕಟಶಿವಾರೆಡ್ಡಿ, ಎಂಎಲ್‌ಸಿ ಇಂಚರ ಗೋವಿಂದರಾಜು, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ, ಮಂಗಮ್ಮಮುನಿಸ್ವಾಮಿ, ವಡಗೂರು ಹರೀಶ್, ರಾಮು, ರಾಮಚಂದ್ರಪ್ಪ, ಪುರಸಭೆ ಸದಸ್ಯ ಸುನೀಲ್, ಸತೀಶ್ ಗೌಡ, ಬಾಲಕೃಷ್ಣ, ಬಾಲಚಂದ್ರ, ವಿಶ್ವನಾಥಗೌಡ, ಶ್ರೀನಿವಾಸಮೂರ್ತಿ, ದೇವರಾಜ್, ರಾಮಪ್ಪ, ಚಂದ್ರಪ್ಪ ಇತರರು ಇದ್ದರು.ಕೋಟ್‌......

ಕೇಂದ್ರ ಸರ್ಕಾರದ ಅಕ್ಕಿಗೆ ಕಾಂಗ್ರೆಸ್ ಸರ್ಕಾರದ ಲೇಬಲ್ ಹಾಕಿಕೊಂಡು ಅನ್ನಭಾಗ್ಯ ಹೆಸರಲ್ಲಿ ವಿತರಿಸುತ್ತಿದೆ. ಆದರೆ ಅಕ್ಕಿ ಸಾಗಾಟದ ಲಾರಿ ಮಾಲೀಕರಿಗೂ 5 ತಿಂಗಳಿಂದ ಹಣ ನೀಡಲು ಖಜಾನೆಯಲ್ಲಿ ಹಣವಿಲ್ಲದಷ್ಟು ಸರ್ಕಾರ ದಿವಾಳಿಯಾಗಿದೆ.

ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ

PREV