ಕನ್ನಡಪ್ರಭ ವಾರ್ತೆ ತುಮಕೂರುರಾಮಕೃಷ್ಣ ನಗರದ ಶ್ರೀ ಶಿರಡಿ ಸಾಯಿನಾಥ ದೇಗುಲ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ರಾಮಕೃಷ್ಣ ನಗರದ ಸಾಯಿನಾಥ ಮಂದಿರದಲ್ಲಿ ಬೆಳಿಗ್ಗೆ 6 ಗಂಟೆಗೆ ಕಾಕಡ ಆರತಿ, 7 ಗಂಟೆಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ, 8 ಗಂಟೆಗೆ ರುದ್ರಾಭಿಷೇಕ, 10 ಗಂಟೆಗೆ 108 ಗುರುಗಳ ಅವಾಹನೆ ಪೂಜಾ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನೆರವೇರಿತು. ಭಕ್ತಾದಿಗಳಿಗಾಗಿ ಬೆಳಿಗ್ಗೆಯಿಂದ ರಾತ್ರಿವರೆಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾಮಕೃಷ್ಣನಗರದ ಸಾಯಿನಾಥ ಮಂದಿರದಲ್ಲಿ 108 ಗುರುಗಳ ಅವಾಹನೆ ಪೂಜೆ ನೆರವೇರಿಸಿದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವೇದಗಳನ್ನು ವಿಭಜನೆ ಮಾಡಿ 4 ವೇದ ಮತ್ತು 18 ಪುರಾಣಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ವೇದ ವ್ಯಾಸರಾಜರಿಗೆ ಸಲ್ಲುತ್ತದೆ. ಶಂಕರಾಚಾರ್ಯ, ಸ್ವಾಮಿ ವಿವೇಕಾನಂದರು, ಶಿರಡಿ ಬಾಬಾರವರು ಮಹಾನ್ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದವರು ಎಂದರು.
ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಮನುಷ್ಯ ವಯಸ್ಸಾದ ನಂತರ ಧಾರ್ಮಿಕತೆಯತ್ತ ವಾಲುವುದು ಬಹಳ ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ತಾವು ಸಹ ಸಾಯಿಬಾಬಾ ಸೇವೆ ಮಾಡುತ್ತಾ ಧಾರ್ಮಿಕತೆಯತ್ತ ಸಾಗುತ್ತಿದ್ದೇನೆ. ಪ್ರತಿಯೊಬ್ಬರೂ ಸಹ ಬದುಕಿನಲ್ಲಿ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಗುರುಪೂರ್ಣಿಮೆ ಅಂಗವಾಗಿ ಸಾಯಿಬಾಬಾ ಮಂದಿರದಲ್ಲಿ ಭಕ್ತರಿಂದ ಬಾಬಾರವರ ಮೂರ್ತಿಗೆ ಅಭಿಷೇಕ ಮಾಡಿಸಲಾಯಿತು.
ದೇವಾಲಯಕ್ಕೆ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್ , ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಸೇರಿದಂತೆ ಅಧಿಕಾರಿಗಳು, ಗಣ್ಯರು ಹಾಗೂ ಭಕ್ತಾದಿಗಳು ಭೇಟಿ ನೀಡಿ ಬಾಬಾ ರವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಗುರುಸಿದ್ದಪ್ಪ, ರಂಗನಾಥ್, ಶಿರಡಿಯ ಪ್ರಮೋದ್ ಮೇಡಿ ಮತ್ತಿತರರು ಪಾಲ್ಗೊಂಡಿದ್ದರು.